ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಭರ್ತಿ 17 ವರ್ಷ; ಅಪರೂಪದ ದಾಖಲೆಗಳ ಪಟ್ಟಿ ಇಲ್ಲಿದೆ

Virat Kohli's Legacy: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ವರ್ಷಗಳನ್ನು ಪೂರೈಸಿದ್ದಾರೆ. ಈ ಅವಧಿಯಲ್ಲಿ ಅವರು 27599 ರನ್‌ಗಳು, 82 ಶತಕಗಳು, 143 ಅರ್ಧಶತಕಗಳು ಸೇರಿದಂತೆ ಅನೇಕ ಅಸಾಧಾರಣ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಐಸಿಸಿ ಟೂರ್ನಮೆಂಟ್‌ಗಳಲ್ಲಿ ಅತಿ ಹೆಚ್ಚು ರನ್ ಮತ್ತು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಏಕದಿನ, ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರ ಕೊಡುಗೆ ಅಪಾರ.

ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಭರ್ತಿ 17 ವರ್ಷ; ಅಪರೂಪದ ದಾಖಲೆಗಳ ಪಟ್ಟಿ ಇಲ್ಲಿದೆ
Virat Kohli

Updated on: Aug 18, 2025 | 4:56 PM

ವಿರಾಟ್ ಕೊಹ್ಲಿ (Virat Kohli).. ವಿಶ್ವ ಕ್ರಿಕೆಟ್​ನ ರನ್​ ಮೆಷಿನ್.. ಒಂದು ದಶಕಕ್ಕೂ ಹೆಚ್ಚು ಕಾಲ ವಿಶ್ವ ಕ್ರಿಕೆಟ್​ ಅನ್ನು ಅಕ್ಷರಶಃ ಆಳಿದ ಈ ದಾಖಲೆಗಳ ಸರದಾರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಇಂದಿಗೆ ಭರ್ತಿ 17 ವರ್ಷಗಳಾಗಿವೆ. 2008 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿರಿಸಿದ ವಿರಾಟ್ ಕೊಹ್ಲಿ ಅಂದಿನಿಂದ ಇಂದಿನವರೆಗೆ ಹಿಂತಿರುಗಿ ನೋಡಿಲ್ಲ. ತನ್ನ ಆಟದ ಮೂಲಕವೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾಧಿಸಿರುವ ವಿರಾಟ್ ನೂರಾರು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ತನ್ನ ನಾಯಕತ್ವದಲ್ಲಿ ಸ್ಮರಣೀಯ ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ.

ಮೇಲೆ ಹೇಳಿದಂತೆ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದ ಕೊಹ್ಲಿಗೆ ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಕೇವಲ 12 ರನ್​ಗಳಿಸಿ ಕೊಹ್ಲಿ ತಮ್ಮ ಇನ್ನಿಂಗ್ಸ್ ಮುಗಿಸಿದ್ದರು. ಆದರೆ ಆ ಬಳಿಕ ಹಂತಹಂತವಾಗಿ ತಮ್ಮ ಆಟದಲ್ಲಿ ಸುಧಾರಣೆ ಕಂಡುಕೊಂಡ ಕೊಹ್ಲಿ ಇಂದು ಮುರಿಯಲು ಕಷ್ಟಕರವಾದ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದ ಕೊಹ್ಲಿ, ಈ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದಾರೆ. 2011 ರ ಏಕದಿನ ವಿಶ್ವಕಪ್ ಮಾತ್ರವಲ್ಲದೆ ಕೊಹ್ಲಿ 2013 ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು 2024 ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದಾರೆ.

ಕೊಹ್ಲಿಯ ಕೆಲವು ವಿಶೇಷ ದಾಖಲೆಗಳನ್ನು ನೋಡುವುದಾದರೆ..

  1. ಕಳೆದ 17 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 27599 ರನ್‌ ಕಲೆಹಾಕಿದ್ದಾರೆ.
  2. ಹಾಗೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 143 ಅರ್ಧಶತಕಗಳು ಮತ್ತು 82 ಶತಕಗಳನ್ನು ಸಿಡಿಸಿದ್ದಾರೆ.
  3. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು 7 ದ್ವಿಶತಕಗಳನ್ನು ಬಾರಿಸಿದ್ದಾರೆ.
  4. ಕಳೆದ 17 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 306 ಸಿಕ್ಸರ್​ಗಳು ಮತ್ತು 2721 ಬೌಂಡರಿಗಳನ್ನು ಸಿಡಿಸಿದ್ದಾರೆ.
  5. ಈ 17 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಗರಿಷ್ಠ 69 ಪಂದ್ಯಶ್ರೇಷ್ಠ ಮತ್ತು 21 ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  6. ಐಸಿಸಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದು, ಅವರ ಬ್ಯಾಟ್​ನಿಂದ 3954 ರನ್ ಸಿಡಿದಿವೆ. ಅಲ್ಲದೆ ಕೊಹ್ಲಿ ಈ ಐಸಿಸಿ ಈವೆಂಟ್​ಗಳಲ್ಲಿ ಅತಿ ಹೆಚ್ಚು ಬಾರಿ ಅಂದರೆ 39 ಬಾರಿ ಐವತ್ತು ಪ್ಲಸ್ ಸ್ಕೋರ್‌ಗಳ ಇನ್ನಿಂಗ್ಸ್ ಆಡಿದ್ದಾರೆ.
  7. ವಿರಾಟ್ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಅತಿ ಹೆಚ್ಚು ಅಂದರೆ 15 ಪಂದ್ಯಶ್ರೇಷ್ಠ ಮತ್ತು 3 ಬಾರಿ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಗೆಯೇ ಅತಿ ಹೆಚ್ಚು ಬಾರಿ ಅಂದರೆ 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
  8. ಐಸಿಸಿ ಟೂರ್ನಮೆಂಟ್‌ಗಳ ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ (1024) ಗಳಿಸಿದ್ದಾರೆ. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು (10) ಅರ್ಧಶತಕಗಳನ್ನು ಸಿಡಿಸಿದ್ದಾರೆ.
  9. ಐಸಿಸಿ ಟೂರ್ನಮೆಂಟ್ ಫೈನಲ್‌ಗಳಲ್ಲಿ ವಿರಾಟ್ ಕೊಹ್ಲಿ 411 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
  10. ಕಳೆದ 17 ವರ್ಷಗಳಲ್ಲಿ ನಾಯಕನಾಗಿ ವಿರಾಟ್ ಅತಿ ಹೆಚ್ಚು ರನ್ (12883) ಗಳಿಸಿದ್ದಾರೆ.
  11. ಕಳೆದ 17 ವರ್ಷಗಳಲ್ಲಿ ವಿರಾಟ್ ಅತಿ ಹೆಚ್ಚು (41) ಶತಕಗಳನ್ನು ಬಾರಿಸಿದ್ದಾರೆ.
  12. ವಿರಾಟ್ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು (7) ದ್ವಿಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ನಾಯಕನಾಗಿ ಅತಿ ಹೆಚ್ಚು ಬಾರಿ ಅಂದರೆ 27 ಪಂದ್ಯಶ್ರೇಷ್ಠ ಮತ್ತು 12 ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  13. ಕಳೆದ 17 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (18098) ಗಳಿಸಿದ್ದಾರೆ.
    ವಿರಾಟ್ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು (88) ಸಿಡಿಸಿದ್ದಾರೆ.
  14. ಕಳೆದ 17 ವರ್ಷಗಳಲ್ಲಿ ಗೆದ್ದ ಪಂದ್ಯಗಳಲ್ಲಿ ವಿರಾಟ್ ಅತಿ ಹೆಚ್ಚು ಶತಕಗಳನ್ನು (58) ಸಿಡಿಸಿದ್ದಾರೆ.
  15. ವಿರಾಟ್ ತಾವು ಗೆದ್ದ ಪಂದ್ಯಗಳಲ್ಲಿ ಗರಿಷ್ಠ 6 ದ್ವಿಶತಕಗಳನ್ನು ಬಾರಿಸಿದ್ದಾರೆ.
  16. ಅಲ್ಲದೆ ಏಕದಿನ ಪಂದ್ಯಗಳಲ್ಲಿ ವೇಗವಾಗಿ 8000, 9000, 10000, 11000, 12000, 13000 ಮತ್ತು 14000 ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.
  17. ಎಲ್ಲಾ ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ, ಕೊಹ್ಲಿ ತಮ್ಮ ಹೆಸರಿನಲ್ಲಿ 82 ಶತಕಗಳನ್ನು ಸಿಡಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 18 August 25