India vs Bangladesh 2nd ODI: ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪರ ಆರಂಭಿಕನಾಗಿ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದಿದ್ದರು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 7 ವಿಕೆಟ್ ನಷ್ಟಕ್ಕೆ 271 ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಲು ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದಿದ್ದರು.
ಫೀಲ್ಡಿಂಗ್ ವೇಳೆ ಟೀಮ್ ಇಂಡಿಯಾನ ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಅಲ್ಲದೆ ಗಾಯ ಗಂಭೀರವಾಗಿದ್ದ ಕಾರಣ ಅವರು ಬ್ಯಾಟಿಂಗ್ಗೆ ಇಳಿದಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಬೇಕಾಯಿತು.
ವಿಶೇಷ ಎಂದರೆ 8 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ 8 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಂದರೆ ಒನ್ಡೇ ಕ್ರಿಕೆಟ್ನಲ್ಲಿ ಕೊಹ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಆಡಿದ್ದು 2014 ರಲ್ಲಿ. ಅಂದು ನ್ಯೂಜಿಲೆಂಡ್ ವಿರುದ್ಧ ಆರಂಭಿಕರಾಗಿ ಆಡಿದ್ದ ಕೊಹ್ಲಿ 3 ರನ್ಗಳಿಸಿ ಔಟಾಗಿದ್ದರು.
ಇದೀಗ ಬಾಂಗ್ಲಾದೇಶ್ ವಿರುದ್ಧ ಕೂಡ ಆರಂಭಿಕನಾಗಿ ವಿಫಲರಾಗಿದ್ದಾರೆ. ಇಬಾದತ್ ಹುಸೇನ್ ಎಸೆದ 2ನೇ ಓವರ್ನ 5 ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ವಿರಾಟ್ ಕೊಹ್ಲಿ ಬೌಲ್ಡ್ ಆದರು. ಇದರೊಂದಿಗೆ 8 ವರ್ಷಗಳ ಬಳಿಕ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿಯ ಇನಿಂಗ್ಸ್ ಅಂತ್ಯವಾಯಿತು.
ಏಕದಿನ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್:
ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಮುಂದುವರೆದಿದೆ. ಕಳೆದ 7 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 10.42 ಸರಾಸರಿಯಲ್ಲಿ ಕೇವಲ 73 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅಚ್ಚರಿಯೆಂದರೆ ಕಳೆದ 7 ಇನ್ನಿಂಗ್ಸ್‌ನಲ್ಲಿ ಒಮ್ಮೆಯು 20ರ ಗಡಿದಾಟಿಲ್ಲ. ಅಂದರೆ 5, 9, 17, 16, 0, 18, 8 ರನ್ಗಳಿಸಿ ಔಟಾಗಿದ್ದರು. ಇದೀಗ 5 ರನ್ನೊಂದಿಗೆ 8ನೇ ಬಾರಿಗೆ ಬೇಗನೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.