ಅಭಿಮಾನಿಗಳ ಹರ್ಷೋದ್ಗಾರ… ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್

|

Updated on: Oct 16, 2024 | 1:02 PM

India vs New Zealand: ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಶುರುವಾಗಿದೆ. ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಎರಡನೇ ಪಂದ್ಯವು ಪುಣೆಯಲ್ಲಿ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಇನ್ನೂ ಸಹ ಶುರುವಾಗಿಲ್ಲ. ಮಳೆಯ ಕಾರಣ ವಿಳಂಬವಾಗಿರುವ ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಇನ್ನೂ ಸಹ ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಫ್ಯಾನ್ಸ್​ ಅಂತು ತಮ್ಮ ನೆಚ್ಚಿನ ತಾರೆಯ ಆಟವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಇದರ ನಡುವೆ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮಳೆಯ ಕಾರಣ ತನ್ನ ಬ್ಯಾಗ್ ಪ್ಯಾಕ್ ಮಾಡ್ಕೊಂಡು ವಿರಾಟ್ ಕೊಹ್ಲಿ ಒಳಾಂಗಣ ಕ್ರೀಡಾಂಗಣದತ್ತ ತೆರಳುವಾಗ ಸ್ಟೇಡಿಯಂನಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮೊಳಗಿದೆ. ಇದೀಗ ಮಳೆಯ ನಡುವೆ ಕುಗ್ಗದ ಕೊಹ್ಲಿ ಅಭಿಮಾನಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿಯಿಂದ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು. ಈ ಸರಣಿಯಲ್ಲಿ 144 ರನ್​ಗಳನ್ನು ಬಾರಿಸಿದರೆ ಕಿವೀಸ್ ವಿರುದ್ಧ 1000 ರನ್ ಕಲೆಹಾಕಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ (1,659) ಮತ್ತು ಸಚಿನ್ ತೆಂಡೂಲ್ಕರ್ (1,595) ಮಾತ್ರ ಈ ಸಾಧನೆ ಮಾಡಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್​ನಲ್ಲಿ 9000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 53 ರನ್​ಗಳು ಮಾತ್ರ. ಮೊದಲ ಟೆಸ್ಟ್ ಪಂದ್ಯದಲ್ಲಿ 53 ರನ್ ಬಾರಿಸಿದರೆ ಭಾರತದ ಪರ ಟೆಸ್ಟ್​ನಲ್ಲಿ 9 ಸಾವಿರ ರನ್​ಗಳ ಗಡಿದಾಟಿದ ನಾಲ್ಕನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಮತ್ತು ಸುನಿಲ್ ಗವಾಸ್ಕರ್ (10,122) ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಈ ದಾಖಲೆಗಳನ್ನು ಕೊಹ್ಲಿ ಕಡೆಯಿಂದ ನಿರೀಕ್ಷಿಸಬಹುದು.

 

 

Follow us on