ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗ: ಆ್ಯಶಸ್ ಸರಣಿ ವೇಳಾಪಟ್ಟಿ ಪ್ರಕಟ
Ashes 2025-26: ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಈವರೆಗೆ 73 ಸರಣಿಗಳನ್ನು ಆಡಿದೆ. ಈ ವೇಳೆ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿದೆ. ಇನ್ನು ಡ್ರಾನಲ್ಲಿ ಅಂತ್ಯಗೊಂಡಿದ್ದು ಕೇವಲ 7 ಸರಣಿಗಳು ಮಾತ್ರ.
ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗ ಎಂದೇ ಪ್ರಸಿದ್ಧಿ ಪಡೆದಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಈ ಟೆಸ್ಟ್ ಸರಣಿಯು ನವೆಂಬರ್ 21, 2025 ರಿಂದ ಶುರುವಾಗಲಿದೆ. ಈ ಬಾರಿ ಕೂಡ ಒಟ್ಟು 5 ಪಂದ್ಯಗಳನ್ನಾಡಲಾಗುತ್ತಿದ್ದು, ಈ ಪಂದ್ಯಗಳಿಗೆ ಆಸ್ಟ್ರೇಲಿಯಾ ಆತಿಥ್ಯವಹಿಸಲಿದೆ.
1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್ನಲ್ಲಿ ಇದುವರೆಗೆ 73 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ.
ವಿಶೇಷ ಎಂದರೆ ಈ 73 ಸರಣಿಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದು ಕೇವಲ 7 ಬಾರಿ ಮಾತ್ರ. ಅಂದರೆ ಆ್ಯಶಸ್ ಸರಣಿಯಲ್ಲಿ ಫಲಿತಾಂಶ ಹೊರಬೀಳುವುದು ಖಚಿತ.
ಇನ್ನು ಈ ಬಾರಿಯ ಆ್ಯಶಸ್ ಸರಣಿ ನಡೆಯುತ್ತಿರುವುದು ಆಸ್ಟ್ರೇಲಿಯಾದಲ್ಲಿ. 2023 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಸರಣಿಯನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಈ ಬಾರಿ ಆಸ್ಟ್ರೇಲಿಯಾದಲ್ಲಿ ಆ್ಯಶಸ್ ಸರಣಿ ನಡೆಯುತ್ತಿರುವುದರಿಂದ ಬಾಝ್ ಬಾಲ್ ಪಡೆಯ ಮೇಲೆ ನಿರೀಕ್ಷೆ ಹೆಚ್ಚಿದೆ.
ಆದರೆ ಅತ್ತ ಇಂಗ್ಲೆಂಡ್ ತಂಡವು ಕಾಂಗರೂ ನಾಡಲ್ಲಿ ಆ್ಯಶಸ್ ರಣಿ ಗೆದ್ದು 15 ವರ್ಷಗಳೇ ಕಳೆದಿವೆ. 2010-11 ರಲ್ಲಿ ಕೊನೆಯ ಬಾರಿ ಆಂಗ್ಲರು ಆಸೀಸ್ ನೆಲದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿದ್ದರು. ಇದಾದ ಬಳಿಕ ಒಮ್ಮೆಯೂ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ಗೆ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ದೇವರ ಉಡುಗೊರೆ… RCB ಅಭಿಮಾನಿಗಳನ್ನು ಹಾಡಿ ಹೊಗಳಿದ ಅಶ್ವಿನ್
ಇತ್ತ ಆಸ್ಟ್ರೇಲಿಯಾ ತಂಡ ಕಥೆ ಕೂಡ ಭಿನ್ನವಾಗಿಲ್ಲ. ಆಂಗ್ಲರ ನಾಡಲ್ಲಿ ಆಸೀಸ್ ಪಡೆ ಆ್ಯಶಸ್ ಸರಣಿ ಗೆದ್ದು ಬರೋಬ್ಬರಿ 24 ವರ್ಷಗಳೇ ಕಳೆದಿವೆ. ಅಂದರೆ 2001 ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ನಲ್ಲಿ ಆಸ್ಟ್ರೇಲಿಯಾ ಸರಣಿ ಜಯಿಸಿತ್ತು. ಇದೀಗ 74ನೇ ಆ್ಯಶಸ್ ಸರಣಿಯ ಸಿದ್ಧತೆಗಳು ಶುರುವಾಗಿದ್ದು, ಅದರ ಮೊದಲ ಭಾಗವಾಗಿ ಇದೀಗ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಆ್ಯಶಸ್ ಸರಣಿ ವೇಳಾಪಟ್ಟಿ 2025-26:
ಪಂದ್ಯ | ದಿನಾಂಕ | ಸ್ಥಳ |
1ನೇ ಟೆಸ್ಟ್ | ನವೆಂಬರ್ 21 ರಿಂದ 25 | ಆಪ್ಟಸ್ ಸ್ಟೇಡಿಯಂ, ಪರ್ತ್ |
2ನೇ ಟೆಸ್ಟ್ | ಡಿಸೆಂಬರ್ 4 ರಿಂದ 8 | ಗಬ್ಬಾ, ಬ್ರಿಸ್ಬೇನ್ |
3ನೇ ಟೆಸ್ಟ್ | ಡಿಸೆಂಬರ್ 17 ರಿಂದ 21 | ಅಡಿಲೇಡ್ ಓವಲ್, ಅಡಿಲೇಡ್ |
4ನೇ ಟೆಸ್ಟ್ | ಡಿಸೆಂಬರ್ 26 ರಿಂದ 30 | ಎಂಸಿಎ , ಮೆಲ್ಬೋರ್ನ್ |
5ನೇ ಟೆಸ್ಟ್ | ಜನವರಿ 4 ರಿಂದ 8 (2026) | ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ |