IND vs NZ: ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್; ಮಳೆಯಿಂದಾಗಿ ಮೊದಲ ದಿನದಾಟ ರದ್ದು
IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಅಂದರೆ ಬುಧವಾರ, ಅಕ್ಟೋಬರ್ 16 ರಂದು ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಅಂದರೆ ಬುಧವಾರ, ಅಕ್ಟೋಬರ್ 16 ರಿಂದ ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ. ನಿಗದಿಯಂತೆ ಇಂದು ಮುಂಜಾನೆ 9 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಸಹ ನಡೆಯಲು ಸಾಧ್ಯವಾಗಲಿಲ್ಲ. ನಿನ್ನೆಗ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ತುಂತುರು ಮಳೆ ಬೀಳುತ್ತಲೇ ಇದೆ. ಮಳೆ ಕೊಂಚ ಕಡಿಮೆಯಾದಾಗಲೆಲ್ಲ ಅಂಪೈರ್ಗಳು ಮೈದಾನವನ್ನು ಪರಿಶೀಲಿಸಿದರು. ಆದರೆ ಪಂದ್ಯಕ್ಕೆ ಮೈದಾನ ಸಜ್ಜಾಗಿಲ್ಲದ್ದನ್ನು ಮನಗಂಡ ಅಂಪೈರ್ಸ್ ಕಾದು ನೋಡುವ ತಂತ್ರಕ್ಕೆ ಮುಂದಾದರು. ಹೀಗಾಗಿ ಮೊದಲ ದಿನದಾಟದ ಮೊದಲೆರಡು ಸೆಷನ್ಗಳವರೆಗೂ ಪಂದ್ಯವನ್ನು ನಡೆಸಲು ಕಾಯಲಾಯಿತು. ಆದರೆ ಆ ಬಳಿಕವೂ ಮಳೆ ನಿಲ್ಲದನ್ನು ಗಮನಿಸಿದ ಅಂಪೈರ್ಸ್, ದಿನದಾಟವನ್ನು ರದ್ದುಗೊಳಿಸಲು ಮುಂದಾದರು.
ಪಂದ್ಯದ ಐದು ದಿನವೂ ಮಳೆ
ಹವಾಮಾನ ವರದಿಯ ಪ್ರಕಾರ, ಭಾರತ- ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬುದು ಖಚಿತವಾಗಿತ್ತು. ಅದರಂತೆ ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಕೂಡ ನಡೆಯದೆ ರದ್ದಾಗಿದೆ. ಹೀಗಾಗಿ ನಾಳೆಯಾದರೂ ಪಂದ್ಯ ಆರಂಭವಾಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆದರೆ ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 20ರವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಪಂದ್ಯದ ಎರಡನೇ ದಿನದಂದು ಶೇ. 41 ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಮೂರನೇ ದಿನದಂದು ಮಳೆ ಇನ್ನಷ್ಟು ಹೆಚ್ಚಲಿದೆ. ಅದರಂತೆ ಶೇ. 67 ರಷ್ಟು ಮಳೆಯಾಗಲಿದೆ.
ನಾಲ್ಕು ಮತ್ತು ಐದನೇ ದಿನವೂ ಇದೆ ಕತೆ ಮುಂದುವರೆಯಲಿದೆ. ಆದರೆ ಮೊದಲ ಮೂರು ದಿನಗಳಿಗೆ ಹೋಲಿಸಿದರೆ, ನಾಲ್ಕನೇ ದಿನದಂದು ಮಳೆ ಕೊಂಚ ತಗ್ಗಲಿದ್ದು, ಈ ದಿನದಂದು ಶೇ.25 ರಷ್ಟು ಮಳೆಯಾಗಲಿದೆ. ಐದನೇ ದಿನ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ಶೇ.40 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ. ಈ ಪ್ರಕಾರ, ಉಭಯ ತಂಡಗಳ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಆದಾಗ್ಯೂ ಮಳೆ ಬಿಡುವು ನೀಡಿದರೆ ಪಂದ್ಯ ಆರಂಭವಾಗಲು ಹೆಚ್ಚು ಸಮಯ ಹಿಡಿಯದು. ಏಕೆಂದರೆ ಚಿನ್ನಸ್ವಾಮಿ ಮೈದಾನದ ಒಳಚರಂಡಿ ವ್ಯವಸ್ಥೆ ಅತ್ಯಾಧುನಿಕವಾಗಿದ್ದು, ಮಳೆ ನಿಂತ 10 ನಿಮಿಷಕ್ಕೆ ಪಂದ್ಯವನ್ನು ಆರಂಭಿಸಬಹುದಾಗಿದೆ.
🚨 Update from Bengaluru 🚨
Day 1 of the 1st #INDvNZ Test has been called off due to rain.
Toss to take place at 8:45 AM IST on Day 2
Start of Play: 9:15 AM IST #TeamIndia | @IDFCFIRSTBank pic.twitter.com/RzmBvduPqr
— BCCI (@BCCI) October 16, 2024
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ
ನ್ಯೂಜಿಲೆಂಡ್ ಟೆಸ್ಟ್ ತಂಡ: ಟಾಮ್ ಲೇಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್ಗೆ ಮಾತ್ರ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ , ಇಶ್ ಸೋಧಿ (ಎರಡನೇ ಮತ್ತು ಮೂರನೇ ಟೆಸ್ಟ್‌ಗಳಿಗೆ ಮಾತ್ರ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Wed, 16 October 24