ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆ ಎಂದ ಫ್ಯಾನ್ಸ್​

| Updated By: ಝಾಹಿರ್ ಯೂಸುಫ್

Updated on: Aug 17, 2021 | 8:32 PM

Virat Kohli vs Rohit Sharma: ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅದರಲ್ಲೂ ಕ್ಯಾಪ್ಟನ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ನಡುವೆ ವೈಮನಸ್ಸಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿರುತ್ತವೆ.

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆ ಎಂದ ಫ್ಯಾನ್ಸ್​
Virat Kohli vs Rohit Sharma
Follow us on

Virat Kohli vs Rohit Sharma: ಕ್ರಿಕೆಟ್ ಕಾಶಿ ಲಾರ್ಡ್ಸ್ (Lord’s) ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ (England) ತಂಡವನ್ನು ಮಣಿಸಿ ಟೀಮ್ ಇಂಡಿಯಾ (Team India) ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 1-0 ಅಂತರದ ಮುನ್ನಡೆ ಸಾಧಿಸಿದೆ. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆಯಿತು. ಮೊದಲ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ (KL Rahul) ಅವರ ಶತಕವಾದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಮೊಹಮ್ಮದ್ ಶಮಿ (Mohammed Shami) ಅರ್ಧಶತಕ, ಜಸ್​ಪ್ರೀತ್ ಬುಮ್ರಾ ಉಪಯುಕ್ತ ಕಾಣಿಕೆ ನೀಡಿ ಟೀಮ್ ಇಂಡಿಯಾಗೆ ನೆರವಾಗಿದ್ದರು. ಇನ್ನು ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿಗಳೇ ನಾಚುವಂತೆ ಮೊಹಮ್ಮದ್ ಸಿರಾಜ್ (Mohammed Siraj) ಒಟ್ಟು 8 ವಿಕೆಟ್ ಉರುಳಿಸಿ ಲಾರ್ಡ್ಸ್​ನಲ್ಲಿ ಇತಿಹಾಸ ನಿರ್ಮಿಸಿದ್ದರು. ಇವೆಲ್ಲದರ ನಡುವೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದು ನಾಯಕ ಹಾಗೂ ಉಪನಾಯಕನ ಸಂಭ್ರಮ.

ಹೌದು, ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅದರಲ್ಲೂ ಕ್ಯಾಪ್ಟನ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ನಡುವೆ ವೈಮನಸ್ಸಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಕಳೆದ ಬಾರಿ ಆಸ್ಟ್ರೇಲಿಯಾ ಸರಣಿ ವೇಳೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿತ್ತು. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕಿಂಗ್ ಕೊಹ್ಲಿ-ಹಿಟ್​ಮ್ಯಾನ್ ಅಭಿಮಾನಿಗಳ ನಡುವೆ ಆಗಾಗ್ಗೆ ವಾಗ್ವಾದಗಳು ಕೂಡ ಕಂಡು ಬರುತ್ತಿರುತ್ತವೆ.

ಆದರೆ ಇಂತಹ ಎಲ್ಲಾ ಸುದ್ದಿಗಳಿಗೆ ಲಾರ್ಡ್ಸ್​ ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ. ನಾವಿಬ್ಬರೂ ಟೀಮ್ ಇಂಡಿಯಾದ ಆಟಗಾರರು ಅಷ್ಟೇ. ಅದಕ್ಕಿಂತ ಮಿಗಿಲಾದದ್ದು ಬೇರೇನಿಲ್ಲ ಎಂದು ಸಾರಿದ್ದಾರೆ. ಹೌದು, ಲಾರ್ಡ್ಸ್​​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಕೊಹ್ಲಿ-ರೋಹಿತ್ ಸಂಭ್ರಮ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ.

ಇಂಗ್ಲೆಂಡ್ ಆಟಗಾರ ಜಾನಿ ಬೈರ್​ಸ್ಟೋ ಕ್ರೀಸ್ ಕಚ್ಚಿ ನಿಂತು ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಸೂಚನೆ ನೀಡಿದ್ದರು. ಇದೇ ವೇಳೆ ಇಶಾಂತ್ ಶರ್ಮಾ ಎಸೆದ ಚೆಂಡು ಬೈರ್​ಸ್ಟೋ ಪ್ಯಾಡ್​ಗೆ ಬಡಿದಿತ್ತು. ಇತ್ತ ಬೌಲರ್​ಗೆ ಅದು ಎಲ್​ಬಿ ಎಂಬ ವಿಶ್ವಾಸವಿರಲಿಲ್ಲ. ಕೀಪರ್ ಕೂಡ ಪೂರ್ಣ ವಿಶ್ವಾಸ ವ್ಯಕ್ತಪಡಿಸಿರಲಿಲ್ಲ. ಇದಾಗ್ಯೂ ಗಟ್ಟಿ ನಿರ್ಧಾರ ಮಾಡಿದ ಟೀಮ್ ಇಂಡಿಯಾ ನಾಯಕ ಡಿಆರ್​ಎಸ್​ ಮೂಲಕ ಮೂರನೇ ಅಂಪೈರ್​ ಮೊರೆ ಹೋದರು. ಕೊಹ್ಲಿ ತೆಗೆದುಕೊಂಡ ಡಿಆರ್‌ಎಸ್ ಭಾರತದ ಪರವಾಗಿತ್ತು. ಜಾನಿ ಬೈರ್​ಸ್ಟೋ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಈ ಆಲಿಂಗನವು ಇದೀಗ ಇಬ್ಬರ ನಡುವಣ ನಾನಾ ಕಥೆಗಳ ಸುದ್ದಿಗಳಿಗೆ ಬ್ರೇಕ್ ನೀಡಿದೆ. ಅಲ್ಲದೆ ಇಬ್ಬರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಆಟಗಾರರ ನಡೆಯನ್ನು ಮೆಚ್ಚಿಕೊಂಡಿದ್ದಾರೆ.

ಅದರಲ್ಲೂ ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್​ಗಳು ಮೈದಾನದಲ್ಲೇ ಆಲಿಂಗನದೊಂದಿಗೆ ಸಂಭ್ರಮಿಸಿದ್ದು ಭಾರತ ತಂಡದ ಪಾಲಿಗೆ ಶುಭ ಸೂಚನೆ ಎಂದು ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಏಕೆಂದರೆ ಇನ್ನೆರಡು ತಿಂಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕೊಹ್ಲಿ-ರೋಹಿತ್ ಅಪ್ಪುಗೆಯೊಂದಿಗೆ ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಪ್ರದರ್ಶಿಸಿರುವುದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತದೆ. ಒಟ್ಟಿನಲ್ಲಿ ನಾನಾ ರೀತಿಯ ಸುಳ್ಳು ಸುದ್ದಿಗಳಿಗೆ ಒಂದೇ ಒಂದು ಅಪ್ಪುಗೆಯ ಮೂಲಕ ಕಿಂಗ್ ಕೊಹ್ಲಿ-ಹಿಟ್​ಮ್ಯಾನ್ ಉತ್ತರ ನೀಡಿರುವುದು ಅಭಿಮಾನಿಗಳ ಪಾಲಿಗೆ ಸಂತಸದ ವಿಷಯ.

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

 

(Virat Kohli hugs Rohit Sharma while celebrating Jonny Bairstow’s dismissal)