Virat Kohli: ತಂಡಕ್ಕಾಗಿ ಸ್ಥಾನ ತ್ಯಾಗ ಮಾಡಲಿದ್ದಾರಾ ಕಿಂಗ್ ಕೊಹ್ಲಿ..?

| Updated By: ಝಾಹಿರ್ ಯೂಸುಫ್

Updated on: Aug 05, 2023 | 4:30 PM

Virat Kohli: ಮೂರನೇ ಕ್ರಮಾಂಕದ ಅತ್ಯಂತ ಯಶಸ್ವಿ ಬ್ಯಾಟರ್ ಎಂದರೆ ಅದು ವಿರಾಟ್ ಕೊಹ್ಲಿ. ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಕಲೆಹಾಕಿರುವ 12898 ರನ್‌ಗಳಲ್ಲಿ 10777 ರನ್‌ಗಳು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬಂದಿವೆ.

Virat Kohli: ತಂಡಕ್ಕಾಗಿ ಸ್ಥಾನ ತ್ಯಾಗ ಮಾಡಲಿದ್ದಾರಾ ಕಿಂಗ್ ಕೊಹ್ಲಿ..?
Virat Kohli
Follow us on

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಹಲವು ಪ್ರಯೋಗ ನಡೆಸಿತ್ತು. ಅದರಲ್ಲೂ ಬ್ಯಾಟಿಂಗ್​ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹೀಗೊಂದು ಪ್ರಯೋಗಕ್ಕಾಗಿಯೇ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಇಳಿದಿರಲಿಲ್ಲ. ಇನ್ನು 2ನೇ ಹಾಗೂ 3ನೇ ಏಕದಿನ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಅಚ್ಚರಿಯ ವಿಷಯ ಎಂದರೆ ಇಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಮೂವರು ಆಟಗಾರರು ಬ್ಯಾಟ್ ಬೀಸಿದ್ದರು.

ಅಂದರೆ ಕಿಂಗ್ ಕೊಹ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿಯುತ್ತಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ತಂಡದಲ್ಲಿದ್ದರೂ ಸೂರ್ಯಕುಮಾರ್​ ಯಾದವ್​ರನ್ನು ಆ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಆದರೆ ಕೇವಲ 19 ರನ್​ಗಳಿಸಿ ಸೂರ್ಯ ನಿರಾಸೆ ಮೂಡಿಸಿದ್ದರು.

ಇನ್ನು 2ನೇ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು ಸಂಜು ಸ್ಯಾಮ್ಸನ್. ಆದರೆ ಸ್ಯಾಮ್ಸನ್ ಕಲೆಹಾಕಿದ್ದು 9 ರನ್​ಗಳು ಮಾತ್ರ. ಹಾಗೆಯೇ 3ನೇ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕ ರುತುರಾಜ್ ಗಾಯಕ್ವಾಡ್ ಪಾಲಾಗಿತ್ತು. ಆದರೆ ರುತುರಾಜ್ 8 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಇಲ್ಲಿ ಮೂರು ಪಂದ್ಯಗಳಲ್ಲೂ ಮೂವರು ಬ್ಯಾಟರ್​ಗಳನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ. ಅಂದರೆ ಮೂರನೇ ಕ್ರಮಾಂಕಕ್ಕಾಗಿ ಟೀಮ್ ಇಂಡಿಯಾ ಹೊಸ ಬ್ಯಾಟರ್​ನ ಹುಡುಕಾಟದಲ್ಲಿರುವುದು ಸ್ಪಷ್ಟ.

ಇತ್ತ ವಿರಾಟ್ ಕೊಹ್ಲಿಗೆ 3ನೇ ಕ್ರಮಾಂಕದ ಖಾಯಂ ಆಗಿದ್ದರೂ, ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಮೂರನೇ ಕ್ರಮಾಂಕದ ಪ್ರಯೋಗಕ್ಕೆ ಟೀಮ್ ಇಂಡಿಯಾ ಯಾಕಾಗಿ ಮುಂದಾಗಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಕಿಂಗ್ ಕೊಹ್ಲಿಯ ಸ್ಥಾನ ಪಲ್ಲಟ.

ಕ್ರಮಾಂಕ ತ್ಯಾಗಕ್ಕೆ ಕೊಹ್ಲಿ ಸಿದ್ಧ?

ಟೀಮ್ ಇಂಡಿಯಾದ ಅತೀ ದೊಡ್ಡ ಸಮಸ್ಯೆ 4ನೇ ಕ್ರಮಾಂಕ. ಈ ಕ್ರಮಾಂಕದಲ್ಲಿ ಹಲವು ಬ್ಯಾಟರ್​ಗಳು ವಿಫಲರಾಗಿದ್ದಾರೆ. ಅದರಲ್ಲೂ 2019 ರ ಏಕದಿನ ವಿಶ್ವಕಪ್​ ಸೆಮಿಫೈನಲ್ ಸೋಲಿಗೆ ಮುಖ್ಯ ಕಾರಣ 4ನೇ ಕ್ರಮಾಂಕದ ಬ್ಯಾಟರ್​ನ ವೈಫಲ್ಯತೆ.
ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ 3ನೇ ಹಾಗೂ 4ನೇ ಕ್ರಮಾಂಕದ ಬ್ಯಾಟರ್​ಗಳ ಬದಲಾವಣೆಗೆ ಚಿಂತನೆ ನಡೆಸಿದೆ.

ಅದರ ಮೊದಲ ಮೊದಲ ಭಾಗ ಈ ಪ್ರಯೋಗ. ಅಂದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಾವುದಾದರೂ ಬ್ಯಾಟರ್​ ಯಶಸ್ಸು ಸಾಧಿಸಿದರೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ.

ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಈ ಹಿಂದೆ ಖಾಯಂ ಆಗಿದ್ದರು. ಆದರೆ ಇದೀಗ ಗಾಯದ ಕಾರಣ ಅವರು ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ ಅಯ್ಯರ್ ಏಷ್ಯಾಕಪ್​ನಲ್ಲಿ ಕಾಣಿಸಿಕೊಳ್ಳುವುದು ಕೂಡ ಅನುಮಾನ.

ಇದೇ ಕಾರಣದಿಂದಾಗಿ ಇದೀಗ 3ನೇ ಕ್ರಮಾಂಕದಲ್ಲಿ ಹೊಸ ದಾಂಡಿಗನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸುತ್ತಿದೆ. ಇಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಿಕರಾದರೆ, ಶುಭ್​ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು.

ಇತ್ತ ಗಿಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಹೆಚ್ಚು. ಇದೇ ಕಾರಣದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ 3ನೇ ಕ್ರಮಾಂಕದ ಪ್ರಯೋಗ ನಡೆಸಲಾಗಿದೆ. ಆದರೆ ಈ ಪ್ರಯೋಗ ಫಲ ನೀಡಿಲ್ಲ.

ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ

ಇದಾಗ್ಯೂ ತಂಡದಲ್ಲಿ ಯುವ ದಾಂಡಿಗ ಶುಭ್​ಮನ್ ಗಿಲ್ ಇದ್ದು, ಏಷ್ಯಾಕಪ್​ನಲ್ಲಿ ಪಂಜಾಬಿ ಬ್ಯಾಟರ್​ನನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ 4ನೇ ಕ್ರಮಾಂಕದ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ವಹಿಸುವ ಸಾಧ್ಯತೆ ಇದೆ.

3ನೇ ಕ್ರಮಾಂಕದಲ್ಲಿ ಕೊಹ್ಲಿಯೇ ಕಿಂಗ್:

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಮೂರನೇ ಕ್ರಮಾಂಕದ ಅತ್ಯಂತ ಯಶಸ್ವಿ ಬ್ಯಾಟರ್ ಎಂದರೆ ಅದು ವಿರಾಟ್ ಕೊಹ್ಲಿ. ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಕಲೆಹಾಕಿರುವ 12898 ರನ್‌ಗಳಲ್ಲಿ 10777 ರನ್‌ಗಳು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬಂದಿವೆ. ಅಲ್ಲದೆ ಒನ್​ಡೌನ್ ವೇಳೆ ಕಣಕ್ಕಿಳಿದು ಕೊಹ್ಲಿ 39 ಶತಕಗಳನ್ನು ಕೂಡ ಬಾರಿಸಿದ್ದಾರೆ. ಹೀಗಾಗಿ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನೂ ಕೂಡ ತಳ್ಳಿಹಾಕುವಂತಿಲ್ಲ.