IPL 2025: ಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ ತಾಯಿ; ಫೋಟೋ ವೈರಲ್

Saroj Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿದಿದೆ. ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿಯ 18 ವರ್ಷಗಳ ಕಾಯುವಿಕೆಗೆ ಅಂತ್ಯವಾಯಿತು. ಕೊಹ್ಲಿ ಮತ್ತು ಅವರ ತಾಯಿ ಸರೋಜ್ ಕೊಹ್ಲಿ ಅವರ ಭಾವುಕ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

IPL 2025: ಆರ್​ಸಿಬಿ ಕಪ್ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ ತಾಯಿ; ಫೋಟೋ ವೈರಲ್
Saroj Kohli

Updated on: Jun 07, 2025 | 9:11 PM

ಐಪಿಎಲ್ 2025 (IPL 2025) ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಜಯಗಳಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ, ಅನುಭವಿ ಆರಂಭಿಕ ವಿರಾಟ್ ಕೊಹ್ಲಿ (Virat Kohli) ಆರ್‌ಸಿಬಿ ಪರ ಅದ್ಭುತ ಬ್ಯಾಟಿಂಗ್ ಮಾಡಿ 43 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಈ ಗೆಲುವಿನೊಂದಿಗೆ ಆರ್​ಸಿಬಿಯ 18 ವರ್ಷಗಳ ದೀರ್ಘ ಕಾಯುವಿಕೆಗೂ ಅಂತ್ಯ ಹಾಡಲಾಗಿತ್ತು. ಆರ್​ಸಿಬಿ ಕಪ್ ಗೆದ್ದ ಕ್ಷಣ ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳಿಗೆ ಒಂದು ಅದ್ಭುತ ಕ್ಷಣವಾಗಿತ್ತು. ಅಭಿಮಾನಿಗಳಿಗೆ ಮಾತ್ರವಲ್ಲದೆ, ವಿರಾಟ್ ಕೊಹ್ಲಿಯ ತಾಯಿ ಕೂಡ ಆರ್​ಸಿಬಿ ಗೆದ್ದ ಬಳಿಕ ಕಣ್ಣೀರಾಗಿದ್ದಾರೆ. ಇದೀಗ ಅದರ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಕೊಹ್ಲಿ ತಾಯಿ ಕಣ್ಣಲ್ಲಿ ಆನಂದ ಭಾಷ್ಪ

ಪಂಜಾಬ್ ಕಿಂಗ್ಸ್ ತಂಡದ ಸೋಲು ಖಚಿತವಾಗುತ್ತಿದ್ದಂತೆ ಬೌಂಡರಿ ಗೆರೆಯ ಬಳಿ ನಿಂತಿದ್ದ ವಿರಾಟ್ ಕೊಹ್ಲಿ ಕೂಡ ಕಣ್ಣೀರಿಟ್ಟಿದ್ದರು. ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ 18 ಸೀಸನ್​ಗಳನ್ನು ಆಡಿರುವ ಕೊಹ್ಲಿ ಚಾಂಪಿಯನ್ ಕಿರೀಟ್ ಖಚಿತವಾದ ಬಳಿಕ ತುಂಬಾ ಭಾವುಕರಾಗಿದ್ದರು. ಒಂದೆಡೆ ಮಗ ಕಪ್ ಗೆದ್ದ ಖುಷಿಯಲ್ಲಿ ಮೈದಾನದಲ್ಲೇ ಕಣ್ಣಿರಿಟ್ಟರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಅವರ ತಾಯಿ ಸರೋಜ್ ಕೊಹ್ಲಿ ಕೂಡ ಆರ್​ಸಿಬಿ ಟ್ರೋಫಿ ಗೆದ್ದಿದ್ದನ್ನು ನೋಡಿ ತುಂಬಾ ಸಂತೋಷಪಟ್ಟರು. ವಿರಾಟ್ ಸಹೋದರಿ ಭಾವನಾ ಕೊಹ್ಲಿ ಈ ಫೋಟೋವನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಭಾವನಾ ಅವರ ಸಹೋದರ ವಿಕಾಸ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ ಕೂಡ ಭಾವುಕರಾಗಿರುವುದನ್ನು ಕಾಣಬಹುದು. ಕಪ್ ಗೆದ್ದ ಬಳಿಕ ಕೊಹ್ಲಿಯ ಕುಟುಂಬದ ಎಲ್ಲರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಐಪಿಎಲ್ ಟ್ರೋಫಿ ಗೆಲ್ಲುವುದು ವಿರಾಟ್ ಅವರ ಕನಸಾಗಿತ್ತು. ಅವರ ಕನಸು ಈಗ ಈಡೇರಿದೆ. ಐಪಿಎಲ್ 2025 ಮುಗಿದ ತಕ್ಷಣ, ವಿರಾಟ್ ಅವರ ಸಹೋದರಿ ಟ್ರೋಫಿಯೊಂದಿಗೆ ಕೊಹ್ಲಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಹೆಚ್ಚು ಟೆಸ್ಟ್ ಕ್ರಿಕೆಟ್​ ಆಡಿದ್ರೆ ಕೊನೆಗೆ ಸಿಗುವುದು ಚೊಂಬೆ; ಕೊಹ್ಲಿ ಹೇಳಿಕೆಗೆ ರಸೆಲ್ ಟಾಂಗ್

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ

ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ ಅಮೋಘವಾಗಿತ್ತು. ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ 54 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 657 ರನ್ ಗಳಿಸಿದರು ಮತ್ತು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಈ ಸೀಸನ್‌ನಲ್ಲಿ ಕೊಹ್ಲಿ 8 ಅರ್ಧಶತಕಗಳನ್ನು ಬಾರಿಸಿದರು.

ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಕಾರಣ ಇನ್ನು ಮುಂದೆ ಅವರು ಏಕದಿನ ಕ್ರಿಕೆಟ್ ಮತ್ತು ಐಪಿಎಲ್​ನಲ್ಲಿ ಮಾತ್ರ ಆಡುವುದನ್ನು ಕಾಣಬಹುದು. ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ನಂತರ, ಅವರು ಟಿ20 ಸ್ವರೂಪಕ್ಕೂ ವಿದಾಯ ಹೇಳಿದ್ದರು. ಸದ್ಯ ಐಪಿಎಲ್ ಟ್ರೋಫಿ ಗೆದ್ದಿರುವ ವಿರಾಟ್ ಕೊಹ್ಲಿ ಈಗ ತಮ್ಮ ರಜಾದಿನಗಳನ್ನು ಆನಂದಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ