AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್​ ಕ್ರಿಕೆಟ್​ಗೆ ಮರಳುತ್ತೀರಾ? ಕೊನೆಗೂ ಉತ್ತರಿಸಿದ ವಿರಾಟ್ ಕೊಹ್ಲಿ

India vs South Africa: ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಬೆನ್ನಲ್ಲೇ ಕಿಂಗ್ ಕೊಹ್ಲಿಯ ಟೆಸ್ಟ್ ಕಂಬ್ಯಾಕ್​ ಬಗ್ಗೆ ಪ್ರಶ್ನೆಗಳೆದ್ದಿವೆ. ಇದೀಗ ರೆಡ್ ಬಾಲ್ ಕ್ರಿಕೆಟ್​ಗೆ ಮರಳುವ ಬಗ್ಗೆ ಖುದ್ದು ವಿರಾಟ್ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ.

ಟೆಸ್ಟ್​ ಕ್ರಿಕೆಟ್​ಗೆ ಮರಳುತ್ತೀರಾ? ಕೊನೆಗೂ ಉತ್ತರಿಸಿದ ವಿರಾಟ್ ಕೊಹ್ಲಿ
Virat Kohli
ಝಾಹಿರ್ ಯೂಸುಫ್
|

Updated on:Dec 01, 2025 | 9:31 AM

Share

ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ 37 ವರ್ಷದ ಯಂಗ್​ ಮ್ಯಾನ್​ ವಿರಾಟ್ ಕೊಹ್ಲಿ.  ಯುವಕರನ್ನೇ ನಾಚಿಸುವಂತೆ ಇಡೀ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದ್ದ ಕೊಹ್ಲಿ 120 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 135 ರನ್ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 349 ರನ್​ಗಳ ಬೃಹತ್ ಮೊತ್ತ ಪೇರಿಸಲು ಕಾರಣಕರ್ತರಾಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 49.2 ಓವರ್​ಗಳಲ್ಲಿ 332 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ 17 ರನ್​ಗಳ ಜಯ ಸಾಧಿಸಿದೆ.

ನಿರೀಕ್ಷೆಯಂತೆ ಈ ಪಂದ್ಯದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಿಂಗ್ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್​ಗೆ ಕಂಬ್ಯಾಕ್ ಬಗ್ಗೆಯೂ ಮೌನ ಮುರಿದಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಈ ರೀತಿಯಾಗಿ ಆಡಿದ್ದು ನಿಜಕ್ಕೂ ನನಗೆ ಸಂತೋಷ ತಂದಿದೆ. ಮೊದಲ 20-25 ಓವರ್​ಗಳು ಪಿಚ್ ಬ್ಯಾಟಿಂಗ್​ಗೆ ಉತ್ತಮವಾಗಿತ್ತು. ಆ ಬಳಿಕ ಪಿಚ್ ನಿಧಾನವಾಗಲು ಪ್ರಾರಂಭಿಸಿತು. ಹೀಗಾಗಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದೆ. ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಅರಿತರೆ ಮಾತ್ರ ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗುತ್ತದೆ. ಹೀಗಾಗಿ ನನ್ನಿಂದ ಉತ್ತಮ ಆಟ ಮೂಡಿಬಂದಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇನ್ನು ಫಿಟ್​ನೆಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಕ್ರಿಕೆಟ್​ಗೂ ನನ್ನ ಫಿಟ್​​ನೆಸ್ ಸಂಬಂಧವಿಲ್ಲ. ಏಕೆಂದರೆ ನಾನು ಫಿಟ್​ನೆಸ್ ಕಡೆ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ. ನಾನು ಸದ್ಯ ಬದುಕುತ್ತಿರುವ ರೀತಿಯೇ ಹಾಗೆ. ನನ್ನ ಜೀವನದ ಪ್ರತಿದಿನ ದೈಹಿಕವಾಗಿ ತುಂಬಾ ಶ್ರಮಿಸುತ್ತೇನೆ ಎಂದರು.

ಇದೇ ವೇಳೆ ಟೆಸ್ಟ್ ಕಂಬ್ಯಾಕ್ ಬಗ್ಗೆ ಕೂಡ ಪರೋಕ್ಷವಾಗಿ ಕೇಳಲಾಗಿದೆ. ಭವಿಷ್ಯದಲ್ಲಿ ನಿಮ್ಮನ್ನು ಬೇರೆ ಫಾರ್ಮ್ಯಾಟ್​ನಲ್ಲಿ ನೋಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಇಲ್ಲ… ಇನ್ಮುಂದೆ ನಾನು ಒಂದೇ ಫಾರ್ಮ್ಯಾಟ್​ನಲ್ಲಿ ಮಾತ್ರ ಆಡಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್​ಗೆ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ ಇದೀಗ ಖುದ್ದು ಕೊಹ್ಲಿಯೇ ಕಂಬ್ಯಾಕ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉಗಾಂಡ ದಾಖಲೆ ಸೇಫ್… ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪಾಕಿಸ್ತಾನ್

ಬದಲಾಗಿ 2027ರವರೆಗೆ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯಲು ಇಚ್ಛಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅದರಂತೆ 2027ರ ಏಕದಿನ ವಿಶ್ವಕಪ್​ವರೆಗೆ ವಿರಾಟ್ ಕೊಹ್ಲಿ ಏಕದಿನ ತಂಡದಲ್ಲಿ ಮುಂದುವರೆಯಲಿದ್ದಾರೆ. ಇದಾದ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೊತೆಯಾಗಿ ನಿವೃತ್ತಿ ಘೋಷಿಸುವುದನ್ನು ಎದುರು ನೋಡಬಹುದು.

Published On - 9:30 am, Mon, 1 December 25

Follow Us