13 ವರ್ಷಗಳ ಬಳಿಕ ದೆಹಲಿ ರಣಜಿ ತಂಡಕ್ಕೆ ವಿರಾಟ್ ಕೊಹ್ಲಿ ಆಯ್ಕೆ..! ರಿಷಬ್​ ಪಂತ್​ಗೂ ಅವಕಾಶ

|

Updated on: Jan 17, 2025 | 3:06 PM

Ranji Trophy: ಬಿಸಿಸಿಐನ ಆದೇಶದಂತೆ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ರಣಜಿ ಟ್ರೋಫಿಗೆ ಮರಳಿದ್ದಾರೆ. ದೆಹಲಿ ತಂಡಕ್ಕೆ ಆಯ್ಕೆಯಾಗಿರುವ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಕ್ರಮವಾಗಿ 13 ಮತ್ತು 8 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ ಆಡಲಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಕೊಹ್ಲಿ ಆಡುವುದು ಖಚಿತವಿಲ್ಲ. ಆದಾಗ್ಯೂ ಅವರು ತಂಡದೊಂದಿಗೆ ಇರಲಿದ್ದಾರೆ.

13 ವರ್ಷಗಳ ಬಳಿಕ ದೆಹಲಿ ರಣಜಿ ತಂಡಕ್ಕೆ ವಿರಾಟ್ ಕೊಹ್ಲಿ ಆಯ್ಕೆ..! ರಿಷಬ್​ ಪಂತ್​ಗೂ ಅವಕಾಶ
ವಿರಾಟ್ ಕೊಹ್ಲಿ, ರಿಷಬ್ ಪಂತ್
Follow us on

ಬಿಸಿಸಿಐನ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಇದೀಗ ದೇಶೀ ಟೂರ್ನಿಯತ್ತ ಮುಖಮಾಡಿದ್ದಾರೆ. ಅದರಂತೆ ಮುಂಬರುವ ರಣಜಿ ಟ್ರೋಫಿ ಆಡುವುದಕ್ಕೆ ಎಲ್ಲಾ ಆಟಗಾರರು ತಮ್ಮ ತಯಾರಿಯನ್ನು ಆರಂಭಿಸಿದ್ದು, ಇದೀಗ ತಮ್ಮ ರಾಜ್ಯ ತಂಡಗಳ ಪರ ಬಹಳ ವರ್ಷಗಳ ಬಳಿಕ ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ದೆಹಲಿ ತನ್ನ ರಣಜಿ ಟ್ರೋಫಿ ತಂಡವನ್ನು ಅಂತಿಮಗೊಳಿಸಿದ್ದು, ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ 13 ವರ್ಷಗಳ ಬಳಿಕ ಕೊಹ್ಲಿ ದೆಹಲಿ ರಣಜಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಲ್ಲದೆ, ರಿಷಬ್ ಪಂತ್ ಕೂಡ ದೆಹಲಿ ತಂಡದಲ್ಲಿದ್ದು, ಅವರು ಕೂಡ 8 ವರ್ಷಗಳ ನಂತರ ಈ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅತ್ಯಂತ ಕಿರಿಯ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ ಎಂಬುದು ದೊಡ್ಡ ಸುದ್ದಿ. ವಾಸ್ತವವಾಗಿ, ದೆಹಲಿಯ ರಣಜಿ ತಂಡದ ನಾಯಕತ್ವವನ್ನು ಆಯುಷ್ ಬದೋನಿಗೆ ಹಸ್ತಾಂತರಿಸಲಾಗಿದೆ.

ವಿರಾಟ್ ಆಡುವುದು ಖಚಿತವಾಗಿಲ್ಲ

ವಿರಾಟ್ ಕೊಹ್ಲಿ ಅವರ ಹೆಸರನ್ನು ತಂಡದಲ್ಲಿ ಸೇರಿಸಲಾಗಿದೆಯಾದರೂ ಅವರು ಸೌರಾಷ್ಟ್ರ ವಿರುದ್ಧ ಆಡುತ್ತಾರೆ ಎಂಬುದು ಖಚಿತವಾಗಿಲ್ಲ. ವಾಸ್ತವವಾಗಿ, ಸಿಡ್ನಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಕುತ್ತಿಗೆ ಉಳುಕಿತ್ತು. ಹೀಗಾಗಿ ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದಕ್ಕಾಗಿ ವಿರಾಟ್ ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಾರೆ. ವಿರಾಟ್ ಫಿಟ್ ಆಗದೇ ಇದ್ದರೆ ಈ ಪಂದ್ಯದಲ್ಲಿ ಆಡುವುದಿಲ್ಲ ಆದರೆ ತಂಡದೊಂದಿಗೆ ಅವರು ರಾಜ್ ಕೋಟ್​ನಲ್ಲಿ ಇರೋದು ಖಚಿತ. ಮತ್ತೊಂದೆಡೆ ಪಂತ್ ಈ ಪಂದ್ಯ ಆಡುವುದು ಖಚಿತವಾಗಿದೆ.

ರಣಜಿ ಟ್ರೋಫಿಯಲ್ಲಿ ವಿರಾಟ್ ಸಾಧನೆ

ರಿಷಬ್ ಪಂತ್ ರಣಜಿ ಟ್ರೋಫಿಯಲ್ಲಿ ಆಡಿರುವ 17 ಪಂದ್ಯಗಳಲ್ಲಿ 58.12 ಸರಾಸರಿಯಲ್ಲಿ 1395 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 4 ಅರ್ಧ ಶತಕಗಳು ಸೇರಿವೆ. ಈ ಟೂರ್ನಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 308 ರನ್ ಆಗಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಆಡಿರುವ 23 ರಣಜಿ ಟ್ರೋಫಿ ಪಂದ್ಯಗಳಲ್ಲಿ 50.77 ಸರಾಸರಿಯಲ್ಲಿ 1574 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳು ಸೇರಿವೆ.

ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ 11

ಸನತ್ ಸಾಂಗ್ವಾನ್,ಅನುಜ್ ರಾವತ್,ಯಶ್ ಧುಲ್,ವಿರಾಟ್ ಕೊಹ್ಲಿ,ಆಯುಷ್ ಬದೋನಿ (ನಾಯಕ),ರಿಷಭ್ ಪಂತ್,ಹಿಮ್ಮತ್ ಸಿಂಗ್,ಸುಮಿತ್ ಮಾಥುರ್,ಮನಿ ಗ್ರೆವಾಲ್,ಸಿಮರ್ಜೀತ್ ಸಿಂಗ್, ಸಿದ್ಧಾಂತ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Fri, 17 January 25