ಐಸಿಸಿ ಏಕದಿನ ವಿಶ್ವಕಪ್ 2023 (ICC World Cup) ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಶುಭಾರಂಭ ಮಾಡಿದೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದರ ನಡುವೆ ಪಂದ್ಯದ ಮಧ್ಯೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವ ಜೊತೆಗೆ ನಿಧಾರಗತಿಯ ಬ್ಯಾಟಿಂಗ್ ನಡೆಸಿತು. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕೆಲಹೊತ್ತಷ್ಟೆ ಆಸರೆಯಾದರು. ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ಆಸೀಸ್ ನಲುಗಿತು. ಇದರಲ್ಲಿ ಆಸ್ಟ್ರೇಲಿಯಾದ ವಿಕೆಟ್-ಕೀಪರ್, ಬ್ಯಾಟರ್ ಅಲೆಕ್ಸ್ ಕ್ಯಾರಿಯನ್ನು ಜಡೇಜಾ ಎಲ್ಬಿ ಬೆಲೆಗೆ ಬೀಳಿಸಿ ಔಟ್ ಮಾಡಿದಾಗ ವಿರಾಟ್ ಕೊಹ್ಲಿ ಮುಗುಳ್ನಕ್ಕು ರೋಹಿತ್ ಶರ್ಮಾಗೆ ಬೆರಳು ತೋರಿಸಿದರು.
ಅಂಪೈರ್ ಔಟ್ ಕೊಟ್ಟು ಕ್ಯಾರಿ ಪೆವಿಲಿಯನ್ ಕಡೆ ಹೋಗುತ್ತಿದ್ದಂತೆ, ಕೊಹ್ಲಿ ಅವರು ರೋಹಿತ್ ಬಳಿ ಬಂದು ಜಡೇಜಾ ರೀತಿಯಲ್ಲಿ ಔಟ್ ಎಂದು ಕೈಬೆರಳು ತೋರಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಇಬ್ಬರು ದಿಗ್ಗಜರ ಉತ್ತಮ ಬಾಂಧವ್ಯವನ್ನು ಎತ್ತಿ ತೋರಿಸುತ್ತಿದೆ. ಇದರ ಜೊತೆಗೆ ಪಂದ್ಯದುದ್ದಕ್ಕೂ ಕೊಹ್ಲಿ-ರೋಹಿತ್ ತಂತ್ರಗಳ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂತು.
ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಯಾರು ಊಹಿಸದ ಅನಗತ್ಯ ದಾಖಲೆ ಬರೆದ ಭಾರತ..!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 199 ರನ್ಗೆ ಆಲೌಟ್ ಆಯಿತು. ತಂಡದ ಪರ ಸ್ಟೀವ್ ಸ್ಮಿತ್ 46, ವಾರ್ನರ್ 41 ಹಾಗೂ ಮಿಚೆಲ್ ಸ್ಟಾರ್ಕ್ 28 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಭಾರತ ಪರ ಜಡೇಜಾ ಮೂರು ವಿಕೆಟ್ ಕಿತ್ತರೆ, ಬುಮ್ರಾ ಹಾಗೂ ಕುಲ್ದೀಪ್ 2, ಸಿರಾಜ್, ಹಾರ್ದಿಕ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.
200 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ 2 ರನ್ಗೆ 3 ವಿಕೆಟ್ ಕಳೆದುಕೊಂಡಿತು. ರೋಹಿತ್, ಕಿಶನ್ ಹಾಗೂ ಅಯ್ಯರ್ ಸೊನ್ನೆ ಸುತ್ತಿದರು. ಆದರೆ, 4ನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ (85) ಹಾಗೂ ಕೆಎಲ್ ರಾಹುಲ್ (ಅಜೇಯ 97) 165 ರನ್ಗ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾರ್ದಿಕ್ ಅಜೇಯ 11 ರನ್ ಗಳಿಸಿದರು. ಭಾರತ 41.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಜಯ ಸಾಧಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ಗೆ ಪಂದ್ಯಶ್ರೇಷ್ಠ ಸಿಕ್ಕಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ