ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಇದೀಗ ಏಷ್ಯಾಕಪ್ಗಾಗಿ ದುಬೈನಲ್ಲಿ ಬೀಡುಬಿಟ್ಟಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆಗಸ್ಟ್ 28 ರಂದು ನಡೆಯಲಿರುವ ಪಾಕಿಸ್ತಾನ (IND vs PAK) ವಿರುದ್ಧದ ಕದನಕ್ಕೆ ಸಜ್ಜಾಗುತ್ತಿದ್ದಾರೆ. ಹೀಗಿರುವಾಗ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತನ್ನ ವೃತ್ತಿಜೀವನದ ಅತ್ಯಂತ ಖುಷಿಯ ಅವಧಿಯ ಬಗ್ಗೆ ವಿವರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ (MS Dhoni) ಜೊತೆ ಆಡಿರುವುದು ನನ್ನ ಜೀವನದಲ್ಲೇ ಅತ್ಯಂತ ಸ್ಮರಣೀಯ ಕ್ಷಣ ಎಂಬಂತೆ ಬರೆದುಕೊಂಡಿರುವ ಕೊಹ್ಲಿ, ಇದಕ್ಕೆ ಬಲದವಾದ ಕಾರಣ ಕೂಡ ನೀಡಿದ್ದಾರೆ.
ಕೊಹ್ಲಿ 2014 ರಲ್ಲಿ ಟೆಸ್ಟ್ ನಾಯಕತ್ವ ಮತ್ತು 2017 ರಲ್ಲಿ ಏಕದಿನ, ಟಿ20 ನಾಯಕತ್ವ ವಹಿಸುವ ಮುನ್ನ ಎಂಎಸ್ ಧೋನಿ ಅಡಿಯಲ್ಲಿ ಪಳಗಿದ್ದರು. ಈ ಬಗ್ಗೆ ಬರೆದುಕೊಂಡಿರುವ ಕೊಹ್ಲಿ, ”ಈ ವ್ಯಕ್ತಿಯ ವಿಶ್ವಾಸಾರ್ಹ ಉಪನಾಯಕನಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಆನಂದದಾಯಕವಾದ ಅವಧಿಯಾಗಿದೆ. ನಮ್ಮ ಪಾಲುದಾರಿಕೆ ಎಂದೆಂದಿಗೂ ವಿಶೇಷವಾಗಿರುತ್ತದೆ. 7+18,” ಎಂದು ಬರೆದುಕೊಂಡಿದ್ದಾರೆ. ಇಲ್ಲಿ ಧೋನಿಯ ಜೆರ್ಸಿ ನಂಬರ್ 7 ಮತ್ತು ಕೊಹ್ಲಿಯದ್ದು 18 ಆಗಿದೆ. ಇದನ್ನು ಕೂಡಿಸಿದಾಗ 25 ಆಗುತ್ತದೆ. ನಿನ್ನೆ ಆಗಸ್ಟ್ 25 ಆಗಿರುವುದರಿಂದ ಕೊಹ್ಲಿ ಈ ಫೋಸ್ಟ್ ಮಾಡಿದ್ದಾರೆ.
Being this man’s trusted deputy was the most enjoyable and exciting period in my career. Our partnerships would always be special to me forever. 7+18 ❤️ pic.twitter.com/PafGRkMH0Y
— Virat Kohli (@imVkohli) August 25, 2022
ಧೋನಿ ಹಾಗೂ ಕೊಹ್ಲಿ ಜೊತೆಯಾಗಿ ನಿಂತು ಅದೆಷ್ಟೋ ಬಾರಿ ಸ್ಮರಣೀಯ ಆಟವನ್ನು ಆಡಿದ್ದಾರೆ. ಅನೇಕ ಬಾರಿ ಇವರಿಬ್ಬರೇ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟ್ವಿಟರ್ನಲ್ಲಿ ಕೊಹ್ಲಿ ಹಂಚಿಕೊಂಡಿರುವ ಫೋಟೋ ಕೂಡ 2016 ಟಿ20 ವಿಶ್ವಕಪ್ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ್ದಾಗಿದೆ. ಇಲ್ಲಿ ಕೊಹ್ಲಿ ಕೇವಲ 51 ಎಸೆತಗಳಲ್ಲಿ 82 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಕೂಡ ಸಾಧಿಸಿತ್ತು.
ಕಳೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡು ಇದೀಗ ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ಕೂಡ ನಿರತರಾಗಿದ್ದಾರೆ. ಟ್ರೈನಿಂಗ್ ಸೆಷನ್ನಲ್ಲಿ ಕೊಹ್ಲಿಯ ಹೊಡೆತವನ್ನು ಕಂಡು ಅಭಿಮಾನಿಗಳಂತು ಶಾಕ್ ಆಗಿದ್ದಾರೆ. ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದು ಚೆಂಡು ಬೌಂಡರಿ ಗೆರೆ ದಾಟಿದೆ.
ಏಷ್ಯಾಕಪ್ 2022ಕ್ಕೆ ಆಗಸ್ಟ್ 27ರಂದು ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಭಾರತ ಆ. 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಆಗಸ್ಟ್ 31 ರಂದು ಹಾಂಗ್ಕಾಂಗ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಟೂರ್ನಿಯ ಎಲ್ಲ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
Published On - 8:43 am, Fri, 26 August 22