ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಆತಿಥೇಯ ಭಾರತ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಸತತ 6 ಪಂದ್ಯಗಳನ್ನು ಗೆದ್ದಿರುವ ರೋಹಿತ್ ಪಡೆ ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು (India vs Sri Lanka) ಮುಂಬೈನ ವಾಖೆಂಡೆ ಸ್ಟೇಡಿಯಂನಲ್ಲಿ ಎದುರಿಸಲಿದೆ. ಆ ನಂತರ ನವೆಂಬರ್ 5 ರಂದು ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಟೀಂ ಇಂಡಿಯಾಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಇದೇ ನವೆಂಬರ್ 5 ರಂದು ತಮ್ಮ 35ನೇ ಜನ್ಮದಿನವನ್ನು (Virat Kohli Birthday) ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಗೆಲುವಿನ ಉಡುಗೊರೆ ನೀಡಲು ಟೀಂ ಇಂಡಿಯಾ ಯೋಚಿಸುತ್ತಿದೆ. ಆದರೆ ಅದಕ್ಕೂ ಮುನ್ನ ಕಿಂಗ್ ಕೊಹ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ 48ನೇ ಶತಕ ಸಿಡಿಸುವ ಮೂಲಕ ಭಾರತದ ಶ್ರೇಷ್ಠ ಬ್ಯಾಟಿಂಗ್ ದೈತ್ಯ ಸಚಿನ್ ತೆಂಡೂಲ್ಕರ್ (49) ಅವರ ಅತ್ಯಧಿಕ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟುವ ಸನಿಹಕ್ಕೆ ಬಂದಿರುವ ಕೊಹ್ಲಿ, ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ್ದು, ‘ನನ್ನ ಕ್ರಿಕೆಟ್ ಜೀವನದಲ್ಲಿ ಈ ಮಟ್ಟಕ್ಕೆ ಬರುತ್ತೇನೆ ಎಂದು ಎಂದೂ ಯೋಚಿಸಿರಲಿಲ್ಲ. ದೇವರ ದಯೆಯಿಂದ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕಾರ್ಯಕ್ಷಮತೆ ಮತ್ತು ಸ್ಥಿರತೆ ಮುಂದುವರಿಯುತ್ತದೆ. ಶತಕಗಳನ್ನು ಬಾರಿಸುವ ಮತ್ತು ಸಾವಿರಾರು ರನ್ ಗಳಿಸುವ ಕನಸು ಕಂಡರೆ, ನೀವು ಅದನ್ನು ಸಾಧಿಸುತ್ತೀರಿ. ಆದರೆ ಅವೆಲ್ಲವೂ ಒಂದೊಂದಾಗಿ ಸಾಕಾರಗೊಳ್ಳುತ್ತವೆ ಎಂದುಕೊಂಡಿರಲಿಲ್ಲ. ನಿಜ ಹೇಳಬೇಕೆಂದರೆ, ಕ್ರಿಕೆಟ್‌ನಲ್ಲಿ ಈ ಸಂಗತಿಗಳು ನಡೆಯುತ್ತವೆ ಮತ್ತು ಪ್ರಯಾಣವು ಹೀಗೆ ಸಾಗುತ್ತದೆ ಎಂದು ಯಾರೂ ಯೋಜನೆಗಳನ್ನು ರೂಪಿಸುವುದಿಲ್ಲ’.
IND vs ENG: ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿಗೆ ಭಾರತ್ ಆರ್ಮಿ ನೀಡಿದ ತಿರುಗೇಟು ಹೇಗಿತ್ತು ಗೊತ್ತಾ?
‘ಈ 12 ವರ್ಷಗಳಲ್ಲಿ ಇಷ್ಟು ರನ್ ಗಳಿಸಿದ್ದು ಖುಷಿ ತಂದಿದೆ. ಒಂದು ಹಂತದಲ್ಲಿ ನನ್ನ ವೃತ್ತಿಪರ ಕ್ರಿಕೆಟ್‌ನಲ್ಲಿನ ನ್ಯೂನತೆಗಳನ್ನು ಗುರುತಿಸಿದ್ದರಿಂದ ಎಲ್ಲವೂ ಚೆನ್ನಾಗಿಯೇ ಸಾಗಿದೆ. ನನ್ನ ಗಮನವೆಲ್ಲ ತಂಡದ ಮೇಲಿದೆ. ಟೀಂ ಇಂಡಿಯಾದ ಯಶಸ್ಸಿಗೆ ಉತ್ತಮ ಪ್ರದರ್ಶನ ನೀಡುವುದು ಮತ್ತು ಕಷ್ಟದ ಸಮಯದಲ್ಲಿಯೂ ತಂಡವನ್ನು ಬೆಂಬಲಿಸುವುದು ನನ್ನ ಗುರಿ. ಅದಕ್ಕಾಗಿಯೇ ನಾನು ನನ್ನ ಜೀವನಶೈಲಿಯನ್ನು ಬದಲಾಯಿಸಿದೆ. ಕಠಿಣ ಶಿಸ್ತು ಅಗತ್ಯ ಎಂದು ನಾನು ಭಾವಿಸಿದೆ. ಆಟವು ಯಾವಾಗಲೂ ನಮ್ಮ ಪ್ರಯತ್ನಗಳನ್ನು ಗುರುತಿಸುತ್ತದೆ. ಇದು ನನ್ನ ವೃತ್ತಿ ಜೀವನದಲ್ಲಿ ನಾನು ಕಲಿತ ಅತ್ಯುತ್ತಮ ವಿಷಯ. ಮೈದಾನದಲ್ಲಿ ಶೇ.100ರಷ್ಟು ಸಮರ್ಪಣಾಭಾವದಿಂದ ಆಡಲು ಶ್ರಮಿಸಿದ್ದೇನೆ. ಇದೆಲ್ಲವನ್ನೂ ದೇವರ ಆಶೀರ್ವಾದ ಎಂದು ಪರಿಗಣಿಸುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ.
2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕಿಂಗ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಕೊಹ್ಲಿ ಈಗಾಗಲೇ ಈ ವಿಶ್ವಕಪ್‌ನಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನೊಳಗೊಂಡಂತೆ 354 ರನ್ ಸಿಡಿಸಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯದ ನಂತರ ನವೆಂಬರ್ 5 ರಂದು ಕೊಹ್ಲಿ ತಮ್ಮ 35ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಇರುವುದರಿಂದ ಆ ದಿನ ಕಿಂಗ್ ಕೊಹ್ಲಿ ಶತಕ ಸಿಡಿಸಲಿ ಎಂದು ಕೋಟ್ಯಾಂತರ ಭಾರತೀಯರ ಆಶಯವಾಗಿದೆ.
ಮತ್ತೊಂದೆಡೆ, ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ಕೊಹ್ಲಿಯ ಜನ್ಮದಿನವನ್ನು ವಿಶೇಷ ಆಚರಿಸಲು ಚಿಂತನೆ ನಡೆಸಿದೆ. ಪಂದ್ಯಕ್ಕೂ ಮುನ್ನ ಐಸಿಸಿ ಅನುಮತಿ ಪಡೆದು ಎಲ್ಲರ ಸಮ್ಮುಖದಲ್ಲಿ ಬೃಹತ್ ಕೇಕ್ ಕತ್ತರಿಸುವ ಪ್ರಸ್ತಾವನೆ ಇದೆ. ಇದರೊಂದಿಗೆ ಮೈದಾನಕ್ಕೆ ಬರುವ ಸುಮಾರು 70 ಸಾವಿರ ಪ್ರೇಕ್ಷಕರಿಗೆ ಕೊಹ್ಲಿ ಮಾಸ್ಕ್ಗಳನ್ನು ನೀಡಲಾಗುತ್ತಿದೆ. ಒಂದರರ್ಥದಲ್ಲಿ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಡೀ ಕ್ರೀಡಾಂಗಣವೇ ಸಂಭ್ರಮದಲ್ಲಿ ಮುಳುಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ