ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England) ನಡುವಣ 5ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ರೋಚಕ ಹೋರಾಟ ಕಂಡು ಬಂತು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಜಾನಿ ಬೈರ್ಸ್ಟೋವ್ ನಡುವಣ ವಾಕ್ಸಮರಕ್ಕೆ ಪಂದ್ಯವು ಸಾಕ್ಷಿಯಾಗಿತ್ತು. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ನ 32ನೇ ಓವರ್ನಲ್ಲಿ ಕೊಹ್ಲಿ ಹಾಗೂ ಬೈರ್ಸ್ಟೋವ್ ನಡುವೆ ಮಾತಿಕ ಚಕಮಕಿ ನಡೆಯಿತು. ಇಬ್ಬರ ನಡುವಿನ ವಾಗ್ವಾದವನ್ನು ಅಂಪೈರ್ಗಳು ಮಧ್ಯಪ್ರವೇಶಿಸುವ ಮೂಲಕ ತಣ್ಣಗಾಗಿಸಿದ್ದರು. ಆದರೆ ಇತ್ತ ವಿರಾಟ್ ಕೊಹ್ಲಿ ತಮ್ಮ ಕೋಪವನ್ನು ಅದುಮಿಟ್ಟುಕೊಂಡರೆ, ಬೈರ್ಸ್ಟೋವ್ ಬ್ಯಾಟ್ ಮೂಲಕ ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಗದಾಪ್ರಹಾರ ನಡೆಸಿದರು. ಏಕೆಂದರೆ ಕೊಹ್ಲಿ ಜೊತೆಗಿನ ವಾಕ್ಸಮರದ ವೇಳೆ ಬೈರ್ಸ್ಟೋವ್ ಕಲೆಹಾಕಿದ್ದು ಕೇವಲ 13 ರನ್. ಈ ಹದಿಮೂರು ರನ್ ಕಲೆಹಾಕಲು ಬರೋಬ್ಬರಿ 61 ಎಸೆತಗಳನ್ನು ಎದುರಿಸಿದ್ದರು.
ಆದರೆ ಕೆಣಕಿದ ಬಳಿಕ ಕೆಂಡವಾದ ಬೈರ್ಸ್ಟೋವ್ ಅಕ್ಷರಶಃ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದ ಜಾನಿ ಬಿ ಬೀಸ್ಟ್ ಮೋಡ್ಗೆ ಬದಲಾದರು. ಪರಿಣಾಮ ಕೇವಲ 119 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ವಾಕ್ಸಮರದ ಬಳಿಕ ಕೇವಲ 58 ಎಸೆತಗಳಲ್ಲಿ ಬೈರ್ಸ್ಟೋವ್ 87 ರನ್ಗಳನ್ನು ಚಚ್ಚಿ ಬಿಸಾಕಿದ್ದರು. ಈ ವೇಳೆ 14 ಫೋರ್ ಹಾಗೂ 2 ಸಿಕ್ಸರ್ಗಳನ್ನು ಸಹ ಸಿಡಿಸಿದ್ದರು.
ಅಂದರೆ ಕೆಣಕುವ ಮುನ್ನ ಇದ್ದ ಬೈರ್ಸ್ಟೋವ್ ಆ ಬಳಿಕ ಭಯಂಕರ ಬೈರ್ಸ್ಟೋವ್ ಬದಲಾಗಿದ್ದರು. ತನ್ನೆಲ್ಲಾ ಕೋಪಗಳನ್ನು ಟೀಮ್ ಇಂಡಿಯಾ ಬೌಲರ್ಗಳ ಮೇಲೆ ತೀರಿಸಿಕೊಂಡಿದ್ದರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೈರ್ಸ್ಟೋವ್ ಬದಲಾಗಿ ಇಂಗ್ಲೆಂಡ್ ತಂಡದ ಯಾವುದೇ ಬ್ಯಾಟ್ಸ್ಮನ್ ಅರ್ಧಶತಕ ಕೂಡ ಬಾರಿಸಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 284 ರನ್ಗಳಿಗೆ ಆಲೌಟ್ ಆಯಿತು. ತಂಡದ ಒಟ್ಟು ಮೊತ್ತದಲ್ಲಿ ಬೈರ್ಸ್ಟೋವ್ ಅವರ 106 ರನ್ಗಳಿರುವುದು ವಿಶೇಷ.
Virat vs Bairstow!!!!pic.twitter.com/0iUNnfeBtr
— Johns. (@CricCrazyJohns) July 3, 2022
ಹೀಗಾಗಿ ವಿರಾಟ್ ಕೊಹ್ಲಿ ಜಾನಿ ಬೈರ್ಸ್ಟೋವ್ರನ್ನು ಕೆಣಕಿ ತಪ್ಪು ಮಾಡಿದ್ರು ಎಂದು ವಿಶ್ಲೇಷಿಸಲಾಗುತ್ತಿದೆ. ಆರಂಭದಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಮುಂದೆ ಎಚ್ಚರಿಕೆಯಿಂದ ಆಡುತ್ತಿದ್ದ ಬೈರ್ಸ್ಟೋವ್ರನ್ನು ಬೇಗನೆ ಔಟ್ ಮಾಡಿದ್ದರೆ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಪಡೆಯುತ್ತಿತ್ತು. ಆದರೆ ಬೈರ್ಸ್ಟೋವ್ ಅಂತಿಮ ಹಂತದಲ್ಲಿ ಅಬ್ಬರಿಸುವ ಮೂಲಕ ಈ ಅಂತರವನ್ನು 132 ರನ್ಗಳಿಗೆ ಇಳಿಸಿದರು. ಒಟ್ಟಿನಲ್ಲಿ ವಿರಾಟ್ ಕೊಹ್ಲಿ-ಜಾನಿ ಬೈರ್ಸ್ಟೋವ್ ನಡುವಿನ ಜಗಳಕ್ಕೆ ಬೆಲೆ ತೆತ್ತಿದ್ದು ಮಾತ್ರ ಟೀಮ್ ಇಂಡಿಯಾ ಬೌಲರ್ಗಳು.
Published On - 10:28 am, Mon, 4 July 22