ಏಕದಿನ ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಮುಗಿದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (61) ಹಾಗೂ ಶುಭ್ಮನ್ ಗಿಲ್ (51) ಉತ್ತಮ ಆರಂಭ ಒದಗಿಸಿದ್ದರು.
ಇನ್ನು ಆ ಬಳಿಕ ಬಂದ ವಿರಾಟ್ ಕೊಹ್ಲಿ (51) ಕೂಡ ಅರ್ಧಶತಕದ ಕೊಡುಗೆ ನೀಡಿದರು. ಇದಾದ ಬಳಿಕ ಜೊತೆಗೂಡಿದ ಶ್ರೇಯಸ್ ಅಯ್ಯರ್ (128) ಹಾಗೂ ಕೆಎಲ್ ರಾಹುಲ್ (102) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 50 ಓವರ್ಗಳಲ್ಲಿ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ನೆದರ್ಲೆಂಡ್ಸ್ ತಂಡವು 47.5 ಓವರ್ಗಳಲ್ಲಿ 250 ರನ್ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ 160 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ಮೂಲಕ ಡ್ರೆಸ್ಸಿಂಗ್ ರೂಮ್ಗೆ ಮರಳಿದ್ದರು. ಆದರೆ ಇದರ ನಡುವೆ ನೆದರ್ಲೆಂಡ್ಸ್ ತಂಡದ ಆಟಗಾರ ರೋಲೋಫ್ ವ್ಯಾನ್ ಡೆರ್ ಮೆರ್ವ್ ಮಾತ್ರ ವಿರಾಟ್ ಕೊಹ್ಲಿ ಜೊತೆ ಕುಶಲೋಪರಿ ಮುಂದುವರೆಸಿದ್ದರು. ಇದೇ ವೇಳೆ ರೋಲೋಫ್ಗೆ ಕಿಂಗ್ ಕೊಹ್ಲಿ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ಅಂದಹಾಗೆ ರೋಲೋಫ್ ವ್ಯಾನ್ ಡೆರ್ ಮೆರ್ವ್ ಹಾಗೂ ವಿರಾಟ್ ಕೊಹ್ಲಿ ಸಹ ಆಟಗಾರರು. ಅಂದರೆ 2009-10 ರ ಐಪಿಎಲ್ ಸೀಸನ್ನಲ್ಲಿ ಇಬ್ಬರು ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಅಂದು ಸೌತ್ ಆಫ್ರಿಕಾ ಆಟಗಾರನಾಗಿ ಐಪಿಎಲ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ರೋಲೋಫ್ 2015 ರಿಂದ ನೆದರ್ಲೆಂಡ್ಸ್ ಪರ ಆಡುತ್ತಿದ್ದಾರೆ.
2009 ರಲ್ಲಿ ಆರ್ಸಿಬಿ ಪರ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರೋಲೋಫ್ ವ್ಯಾನ್ ಡೆರ್ ಮೆರ್ವ್ 9 ವಿಕೆಟ್ ಕಬಳಿಸಿದ್ದರು. ಹಾಗೆಯೇ 122 ರನ್ಗಳ ಕೊಡುಗೆ ನೀಡಿದ್ದರು. ಆದರೆ 2010 ರಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವರಿಗೆ ಅವಕಾಶ ಲಭಿಸಿತ್ತು.
ಇದಾದ ಬಳಿಕ 2011 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿ ಪರ ಕಣಕ್ಕಿಳಿದಿದ್ದ ರೋಲೋಫ್ 3 ಸೀಸನ್ ಆಡಿದ್ದರು. ಈ ವೇಳೆ ಒಟ್ಟು 10 ಪಂದ್ಯಗಳಿಂದ 10 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಅವರ ಐಪಿಎಲ್ ಕೆರಿಯರ್ ಕೂಡ ಅಂತ್ಯವಾಗಿತ್ತು.
ಇತ್ತ ಈ ಬಾರಿಯ ವಿಶ್ವಕಪ್ನೊಂದಿಗೆ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ಹೊಸ್ತಿಲಲ್ಲಿರುವ 38 ವರ್ಷದ ರೋಲೋಫ್ ವ್ಯಾನ್ ಡೆರ್ ಮೆರ್ವ್ ಭಾರತದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿರುವುದು ವಿಶೇಷ. ಈ ವಿಕೆಟ್ ಜೊತೆ ಕಿಂಗ್ ಕೊಹ್ಲಿಯ ಜೆರ್ಸಿ ಉಡುಗೊರೆಯೊಂದಿಗೆ ರೋಲೋಫ್ ವ್ಯಾನ್ ಡೆರ್ ಮೆರ್ವ್ ಈ ಬಾರಿಯ ಏಕದಿನ ವಿಶ್ವಕಪ್ಗೆ ವಿದಾಯ ಹೇಳಿದ್ದಾರೆ.