2008 ರಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಭಾರತ ಕಿರಿಯರ ತಂಡ ಅಂಡರ್ 19 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಂದು ಕೊಹ್ಲಿಯ ಜೊತೆಗಿದ್ದ ಇಬ್ಬರು ಆಟಗಾರರು ಇದೀಗ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಅದು ಕೂಡ ಅಂಪೈರ್ಗಳಾಗಿ ಎಂಬುದು ವಿಶೇಷ. ವಿರಾಟ್ ಕೊಹ್ಲಿಯ ಜೊತೆಗೆ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ತನ್ಮಯ್ ಶ್ರೀವಾಸ್ತವ್ (33 ವರ್ಷ) ಮತ್ತು ಅಜಿತೇಶ್ ಅರ್ಗಲ್ (34 ವರ್ಷ) ಕೆಲ ವರ್ಷಗಳ ಹಿಂದೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು.
ಇದೀಗ ಈ ಇಬ್ಬರು ಕ್ರಿಕೆಟಿಗರು ಬಿಸಿಸಿಐ ನಡೆಸಿದ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಂತೆ ಅಜಿತೇಶ್ ಮತ್ತು ತನ್ಮಯ್ ದೇಶೀಯ ಅಂಗಳದಲ್ಲಿ ಅಂಪೈರ್ಗಳಾಗಿ ಕಾಣಿಸಿಕೊಳ್ಳುವ ದಿನ ದೂರವಿಲ್ಲ.
ಬಿಸಿಸಿಐ ಸಮಿತಿಯ ಭಾಗ:
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಜಿತೇಶ್ ಮತ್ತು ತನ್ಮಯ್ ಅವರು ಆಗಸ್ಟ್ 17-19 ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಬಿಸಿಸಿಐ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಸೆಮಿನಾರ್‌ಗಳಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಮಂಡಳಿ ಆಯೋಜಿಸುವ ಪಂದ್ಯಗಳಲ್ಲಿ ಅಧಿಕೃತವಾಗಿ ಕಾಣಿಸಿಕೊಳ್ಳಲಿದ್ದಾರೆ.
ಅದರಂತೆ ವಿರಾಟ್ ಕೊಹ್ಲಿಯ ಸಹ ಆಟಗಾರರು ಪ್ರಥಮ ದರ್ಜೆ ಪಂಧ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಪೈರಿಂಗ್ ಮಾಡಬೇಕೆಂದರೆ ಐಸಿಸಿ ನಡೆಸುವ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದ ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅಂಪೈರ್ಗಳಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.