
ಸುಮಾರು 13 ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಮೊದಲ ದಿನ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಇಂದಿನಿಂದ ಆರಂಭವಾಗಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಪಂದ್ಯ ಆಡುತ್ತಿರುವ ಕೊಹ್ಲಿಗೆ ಮೊದಲ ದಿನ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಾಳೆಯವರೆಗೂ ಕಾಯಬೇಕಿದೆ. ಇನ್ನು ಮೊದಲ ದಿನ ಡೆಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡ ಮೊದಲ ಇನಿಂಗ್ಸ್ನಲ್ಲಿ ರೈಲ್ವೇಸ್ ತಂಡವನ್ನು ಕೇವಲ 241 ರನ್‌ಗಳಿಗೆ ಆಲೌಟ್ ಮಾಡಿದೆ.
ಮೇಲೆ ಹೇಳಿದಂತೆ ವಿರಾಟ್ ಕೊಹ್ಲಿ 13 ವರ್ಷಗಳ ನಂತರ ರಣಜಿ ಪಂದ್ಯ ಆಡುತ್ತಿದ್ದಾರೆ. ಹೀಗಾಗಿ ಅವರನ್ನು ನೋಡಲು ಅಭಿಮಾನಿಗಳು ತಂಡೋಪತಂಡವಾಗಿ ಜಮಾಯಿಸಿದ್ದಾರೆ. ಇದಕ್ಕೆ ಪೂರಕವಾಗಿ ಡಿಡಿಸಿಎ ಕೂಡ ಭಾರಿ ವ್ಯವಸ್ಥೆ ಮಾಡಿದ್ದು, ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ. ಹೀಗಾಗಿ ಮೊದಲ ದಿನದಾಟದಲ್ಲಿ ಇಡೀ ಕ್ರೀಡಾಂಗಣವೇ ತುಂಬಿ ತುಳುಕುತ್ತಿತ್ತು. ಆದರೆ ಟಾಸ್ ಗೆದ್ದ ಡೆಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರಿಂದ, ಕೊಹ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ತಂಡ 241 ರನ್‌ಗಳಿಗೆ ಆಲೌಟ್ ಆಗಿದೆ. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಉಪೇಂದ್ರ ಯಾದವ್ 95 ರನ್ಗಳ ಇನ್ನಿಂಗ್ಸ್ ಆಡಿದರೆ, ಕರಣ್ ಶರ್ಮಾ ಕೂಡ 50 ರನ್ಗಳ ಕಾಣಿಕೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಹಿಮಾಂಶು 29 ರನ್ ಹಾಗೂ ಮೊಹಮ್ಮದ್ ಸೈಫ್ 24 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಇದೀಗ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಡೆಲ್ಲಿ ತಂಡ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅಲ್ಲದೆ ಅವರ ಕೊನೆಯ ರಣಜಿ ಪಂದ್ಯದಲ್ಲೂ ಅವರು ಅದೇ ಸಂಖ್ಯೆಯಲ್ಲಿ ಬ್ಯಾಟ್ ಬೀಸಿದ್ದರು. ಇನ್ನು ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದ್ದ ದೆಹಲಿ ತಂಡದ ನಾಯಕ ಆಯುಷ್ ಬಡೋನಿ, ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು ಎಂದು ಹೇಳಿದರು. 2012ರಲ್ಲಿ ಕೊನೆಯ ಬಾರಿ ಈ ಟೂರ್ನಿಯಲ್ಲಿ ಬ್ಯಾಟ್ ಮಾಡಿದ್ದ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 14 ಮತ್ತು 43 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದು ಕೊಹ್ಲಿಗೆ 24ನೇ ರಣಜಿ ಪಂದ್ಯವಾಗಿದ್ದು, ಇದಕ್ಕೂ ಮೊದಲು ಅವರು ಈ ಟೂರ್ನಿಯಲ್ಲಿ 23 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 50.77 ಸರಾಸರಿಯಲ್ಲಿ 5 ಶತಕ ಸೇರಿದಂತೆ 1574 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ