IPL 2021: SRH ಗೆ ಸೋಲುಣಿಸಿ ದಾಖಲೆ ಬರೆಯಲು RCB ಸಜ್ಜು

| Updated By: ಝಾಹಿರ್ ಯೂಸುಫ್

Updated on: Oct 06, 2021 | 2:58 PM

RCB: ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಆರ್​ಸಿಬಿ ಎಸ್​ಆರ್​ಹೆಚ್​ ವಿರುದ್ದ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಪಾಯಿಂಟ್​ ಹೆಚ್ಚಿಸುವ ಇರಾದೆಯಲ್ಲಿದೆ.

IPL 2021: SRH ಗೆ ಸೋಲುಣಿಸಿ ದಾಖಲೆ ಬರೆಯಲು RCB ಸಜ್ಜು
ರಾಯಲ್ ಚಾಲೆಂಜರ್ಸ್ ಬೆಂಗಳೂರು
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್​ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆಲುವು ದಾಖಲಿಸಿದರೆ ದಾಖಲೆ ನಿರ್ಮಾಣವಾಗಲಿದೆ. ಹೌದು, ಎಸ್​ಆರ್​ಹೆಚ್​ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲುವು ದಾಖಲಿಸಿದರೆ ಐಪಿಎಲ್​ನಲ್ಲಿ 100 ಪಂದ್ಯಗಳಲ್ಲಿ ಗೆದ್ದ ತಂಡಗಳ ಪಟ್ಟಿಗೆ ಆರ್​ಸಿಬಿ ಸೇರ್ಪಡೆಯಾಗಲಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಮಾತ್ರ ಐಪಿಎಲ್​ನಲ್ಲಿ 100 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ. ಇದೀಗ 208ನೇ ಮ್ಯಾಚ್ ಆಡಲಿರುವ ಆರ್​ಸಿಬಿ 100ನೇ ಗೆಲುವು ದಾಖಲಿಸುವ ತವಕದಲ್ಲಿದೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 216 ಪಂದ್ಯಗಳಿಂದ ಒಟ್ಟು 126 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹಾಗೆಯೇ ಎಂಎಸ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ 192 ಪಂದ್ಯಗಳಲ್ಲಿ 115 ಗೆಲುವಿನೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹಾಗೆಯೇ ಕೋಲ್ಕತ್ತಾ ನೈಟ್ ರೈಡರ್ಸ್ 205 ಪಂದ್ಯಗಳಲ್ಲಿ 105 ಪಂದ್ಯಗಳನ್ನು ಗೆದ್ದಿದ್ದು, ಈ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ. ಇದೀಗ ಈ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಲು ಆರ್‌ಸಿಬಿಗೆ ಒಂದು ಗೆಲುವಿನ ಅವಶ್ಯಕತೆಯಿದ್ದು, ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸಿ ಹೊಸ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.

ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಆರ್​ಸಿಬಿ ಎಸ್​ಆರ್​ಹೆಚ್​ ವಿರುದ್ದ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಪಾಯಿಂಟ್​ ಹೆಚ್ಚಿಸುವ ಇರಾದೆಯಲ್ಲಿದೆ. ಅಲ್ಲದೆ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಆರ್​ಸಿಬಿ ಗೆದ್ದರೆ ಪಾಯಿಂಟ್​ ಟೇಬಲ್​ನಲ್ಲಿ 2ನೇ ಸ್ಥಾನ ಅಲಂಕರಿಸುವ ಅವಕಾಶವಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಆರ್​ಸಿಬಿಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ:  IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(Virat Kohli’s RCB take on SRH with eye on 100th win in IPL history)