ವಿಜಯ ಹಝಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಅಂಕಿ ಅಂಶಗಳು ಹೇಗಿದೆ?

Vijay Hazare Trophy 2025: ಡಿಸೆಂಬರ್ 24 ರಂದು ಶುರುವಾಗಲಿರುವ ದೆಹಲಿ ಮತ್ತು ಆಂಧ್ರ ಪ್ರದೇಶ್ ನಡುವಣ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಮೂಲಕ ಕೊಹ್ಲಿ 15 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಅವರು 2010 ರಲ್ಲಿ ಕೊನೆಯ ಬಾರಿ ದೇಶೀಯ ಏಕದಿನ ಪಂದ್ಯವಾಡಿದ್ದರು.

ವಿಜಯ ಹಝಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಅಂಕಿ ಅಂಶಗಳು ಹೇಗಿದೆ?
Virat Kohli

Updated on: Dec 23, 2025 | 11:55 AM

ಬರೋಬ್ಬರಿ 15 ವರ್ಷಗಳ ಬಳಿಕ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈ ಬಾರಿ ಕೂಡ ಕೊಹ್ಲಿ ಕಣಕ್ಕಿಳಿಯಲಿರುವುದು ದೆಹಲಿ ಪರ. 2008 ರಲ್ಲಿ ಚೊಚ್ಚಲ ವಿಜಯ ಹಝಾರೆ ಟೂರ್ನಿ ಆಡಿದ್ದ ಕೊಹ್ಲಿ 2010 ರವರೆಗೆ ದೇಶೀಯ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಟೀಮ್ ಇಂಡಿಯಾಗೆ ಆಯ್ಕೆಯಾದ ಬಳಿಕ ಕಿಂಗ್ ಕೊಹ್ಲಿ ಹಿಂತಿರುಗಿ ನೋಡಿರಲಿಲ್ಲ. ಅದರಲ್ಲೂ 2011 ರ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಹೀಗಾಗಿ ದೇಶೀಯ ಟೂರ್ನಿ ಆಡುವ ಪ್ರಮೇಯವೇ ಬಂದಿರಲಿಲ್ಲ.

ಇದೀಗ ಭಾರತ ತಂಡದಿಂದ ಹೊರಗುಳಿದಿರುವ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಕಣಕ್ಕಿಳಿಯಬೇಕೆಂದು ಬಿಸಿಸಿಐ ನಿರ್ದೇಶಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ವಿಜಯ ಹಝಾರೆ ಟೂರ್ನಿಯಲ್ಲಿ  ಕೊಹ್ಲಿ ಪ್ರದರ್ಶನ ಹೇಗಿದೆ?

ಎದುರಾಳಿ ತಂಡ ರನ್ಸ್​ ಬಾಲ್ಸ್ ಫೋರ್/ಸಿಕ್ಸ್  ಸ್ಥಳ ದಿನಾಂಕ
ಬಂಗಾಳ 56 56 1/3 ವಿಶಾಖಪಟ್ಟಣಂ ಏಪ್ರಿಲ್ 2, 2008
ಜಮ್ಮು ಮತ್ತು ಕಾಶ್ಮೀರ 102 113 14/0 ಧರ್ಮಶಾಲಾ ಫೆಬ್ರವರಿ 15, 2009
ಪಂಜಾಬ್ 119* 110 14/3 ಧರ್ಮಶಾಲಾ ಫೆಬ್ರವರಿ 17, 2009
ಹಿಮಾಚಲ ಪ್ರದೇಶ 23 26 4/0 ಉನಾ ಫೆಬ್ರವರಿ 19, 2009
ಹರ್ಯಾಣ 124 82 9/7 ಧರ್ಮಶಾಲಾ ಫೆಬ್ರವರಿ 21, 2009
ಸರ್ವೀಸಸ್ 45 58 5/1 ಉನಾ ಫೆಬ್ರವರಿ 23, 2009
ರೈಲ್ವೇಸ್ 114  93 17/1 ಅಗರ್ತಲಾ ಫೆಬ್ರವರಿ 28, 2009
ಬಂಗಾಳ 7 10 1/0 ಅಗರ್ತಲಾ ಮಾರ್ಚ್ 4, 2009
ಜಮ್ಮು ಮತ್ತು ಕಾಶ್ಮೀರ 16 16 3/0 ಸಿರ್ಸಾ ಫೆಬ್ರವರಿ 10, 2010
ಪಂಜಾಬ್ 71 48 4/2 ಸಿರ್ಸಾ ಫೆಬ್ರವರಿ 12, 2010
ಹಿಮಾಚಲ ಪ್ರದೇಶ 32 33 6/0 ಸಿರ್ಸಾ ಫೆಬ್ರವರಿ 14, 2010
ಹರ್ಯಾಣ 94 99 10/0 ರೋಹ್ಟಕ್ ಫೆಬ್ರವರಿ 16, 2010
ಸರ್ವೀಸಸ್ 16 8 3/0 ಗುರ್​ಗಾವ್ ಫೆಬ್ರವರಿ 18, 2010

ವಿರಾಟ್ ಕೊಹ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಈವರೆಗೆ 13 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 819 ರನ್​ಗಳು. ಇದರ ನಡುವೆ ಹರ್ಯಾಣ ವಿರುದ್ಧ 124 ರನ್​ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್.

ಇನ್ನು ಈ 13 ಇನಿಂಗ್ಸ್​ಗಳಲ್ಲಿ ಕೊಹ್ಲಿ ಬ್ಯಾಟ್​ನಿಂದ 4 ಶತಕ ಹಾಗೂ 3 ಅರ್ಧಶತಕಗಳು ಮೂಡಿಬಂದಿವೆ. ಅಲ್ಲದೆ 91 ಫೋರ್ ಹಾಗೂ 17 ಸಿಕ್ಸರ್​ಗಳನ್ನು ಸಹ ಬಾರಿಸಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಡಫಿ

ಅಂದರೆ ದೇಶೀಯ ಏಕದಿನ ಟೂರ್ನಿಯಲ್ಲಿ 13 ಇನಿಂಗ್ಸ್ ಆಡಿರುವ ಕೊಹ್ಲಿ 106 ರ ಸ್ಟ್ರೈಕ್ ರೇಟ್​ನಲ್ಲಿ 68.25 ಸರಾಸರಿಯಲ್ಲಿ ಒಟ್ಟು 819 ರನ್​ಗಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಕೊಹ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ.