ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಮ್ಯಾಚ್ ಇರಲ್ಲ..!
Vijay Hazara Trophy 2025: ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ವಿಜಯ ಹಝಾರೆ ಟೂರ್ನಿಯ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಪಂದ್ಯ ಆಯೋಜಿಸುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕನಸು ಕಮರಿದೆ. ಡಿಸೆಂಬರ್ 24 ರಂದು ದೆಹಲಿ ಹಾಗೂ ಆಂಧ್ರ ಪ್ರದೇಶ್ ನಡುವಣ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿತ್ತು. ಆದರೆ ಈ ಪಂದ್ಯಕ್ಕೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಸ್ಟೇಡಿಯಂನಲ್ಲಿನ ಸುರಕ್ಷತೆಯನ್ನು ಪರಿಶೀಲಿಸಿದ್ದರು. ಈ ಪರಿಶೀಲನೆಯ ವರದಿಯು ನಕಾರತ್ಮಕವಾಗಿದ್ದು, ಪಂದ್ಯವನ್ನು ಆಯೋಜಿಸಲು ಸೂಕ್ತವಲ್ಲ ಎಂದು ತಿಳಿಸಿದೆ.
ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯವನ್ನು ಆಯೋಜಿಸಲು ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ದೆಹಲಿ ಹಾಗೂ ಆಂಧ್ರ ಪ್ರದೇಶ್ ನಡುವಣ ಪಂದ್ಯವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಪಂದ್ಯ ನಡೆಯುವುದು ಎಲ್ಲಿ?
ದೆಹಲಿ ಪರ ಈ ಬಾರಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದ ದೆಹಲಿ ಹಾಗೂ ಆಂಧ್ರ ಪ್ರದೇಶ್ ನಡುವಣ ಪಂದ್ಯವು ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ. ಇತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯದ ಆಯೋಜನೆಗೆ ಅನುಮತಿ ನಿರಾಕರಿಸಿರುವುದರಿಂದ ಮ್ಯಾಚ್ ನಡೆಯುವುದು ಎಲ್ಲಿ ಪ್ರಶ್ನೆ ಮೂಡುವುದು ಸಹಜ.
ಸದ್ಯದ ಮಾಹಿತಿ ಪ್ರಕಾರ, ಈ ಮ್ಯಾಚ್ ಅನ್ನು ಆಲೂರಿನಲ್ಲಿರುವ ಕೆಎಸ್ಸಿಎ ಮೈದಾನದಲ್ಲಿ ನಡೆಸುವ ಸಾಧ್ಯತೆಯಿದೆ. ಆದರೆ ನಾಳೆಯೇ ಈ ಮ್ಯಾಚ್ ನಡೆಯಲಿದೆಯಾ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಏಕೆಂದರೆ ನಾಳೆ ಆಲೂರಿನಲ್ಲಿ ಮೂರು ಮ್ಯಾಚ್ಗಳು ನಡೆಯಲಿದೆ.
ಗ್ರೌಂಡ್ ಒಂದರಲ್ಲಿ ಒರಿಸ್ಸಾ ಮತ್ತು ಸೌರಾಷ್ಟ್ರ ಮುಖಾಮುಖಿಯಾದರೆ, ಗ್ರೌಂಡ್ ಎರಡಲ್ಲಿ ಗುಜರಾತ್ ಮತ್ತು ಸರ್ವೀಸಸ್ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಮೂರನೇ ಗ್ರೌಂಡ್ನಲ್ಲಿ ಹರ್ಯಾಣ ಮತ್ತು ರೈಲ್ವೇಸ್ ಮುಖಾಮುಖಿಯಾಗಲಿದೆ. ಹೀಗಾಗಿ ದೆಹಲಿ ಮತ್ತು ಆಂಧ್ರ ಪ್ರದೇಶ್ ನಡುವಣ ಪಂದ್ಯವನ್ನು ಆಲೂರಿನಲ್ಲೇ ಗುರುವಾರ ಆಯೋಜಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಅನುಮತಿ ನಿರಾಕರಣೆ ಯಾಕೆ?
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಟಾಪ್-5 ಬ್ಯಾಟರ್ಗಳು ಯಾರೆಲ್ಲಾ?
ಅಲ್ಲದೆ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಆಯೋಗವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸೂಚಿಸಲಾದ ಸಲಹೆಗಳನ್ನು ಪಾಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಸೂಚಿಸಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದ ಹೊರತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಅನುಮತಿ ಸಿಗುವ ಸಾಧ್ಯತೆಯಿಲ್ಲ.

