ಕ್ರಿಕೆಟ್ ಅಂಗಳದಲ್ಲಿ ಅದ್ಭತ ಕ್ಯಾಚ್ಗಳು ಆಗಾಗ್ಗೆ ಕಂಡು ಬರುತ್ತದೆ. ಅದರಲ್ಲೂ ಕೆಲವೊಂದು ಕ್ಯಾಚ್ಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಅಂತಹದೊಂದು ಕ್ಯಾಚ್ಗೆ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಟಾಲಿಟಿ ಟಿ20 ಬ್ಲಾಸ್ಟ್ ಲೀಗ್ ಸಾಕ್ಷಿಯಾಗಿದೆ. ಮ್ಯಾಂಚೆಸ್ಟರ್ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಸೆಕ್ಸ್ ಹಾಗೂ ಲಂಕಾಶೈರ್ ತಂಡಗಳು ಮುಖಾಮುಖಿಯಾಗಿತ್ತು.
ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ನಿಗದಿತ ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಲಂಕಾಶೈರ್ ತಂಡಕ್ಕೆ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಉತ್ತರ ಆರಂಭ ಒದಗಿಸಿದ್ದರು. ಪಂದ್ಯ 9ನೇ ಓವರ್ನಲ್ಲಿ ಸಾಲ್ಟ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಅತ್ತ ಬೌಂಡರಿ ಲೈನ್ನಲ್ಲಿದ್ದ ಫೀಲ್ಡರ್ ಚೆಂಡನ್ನು ಅದ್ಭುತವಾಗಿ ಗುರುತಿಸಿ ಕೈಯಲ್ಲಿ ಬಂಧಿಸಿದರು. ಆದರೆ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟುತ್ತಿದ್ದಂತೆ ಜಿಗಿದು ಚೆಂಡನ್ನು ಮೈದಾನದೊಳಕ್ಕೆ ಎಸೆದರು. ಅಷ್ಟರಲ್ಲಾಗಲೇ ಓಡಿ ಬಂದಿದ್ದ ಬೆನ್ ಅಲಿಸನ್ ಚೆಂಡನ್ನು ಹಿಡಿದರು.
ಮೈಕೆಲ್ ಪೆಪ್ಪರ್ ಹಾಗೂ ಬೆನ್ ಅಲಿಸನ್ ಅದ್ಭುತ ಫೀಲ್ಡಿಂಗ್ನಿಂದ 27 ರನ್ಗಳಿಸಿದ್ದ ಫಿಲಿಪ್ ಸಾಲ್ಟ್ ಹೊರನಡೆಯಬೇಕಾಯಿತು. ಇದೀಗ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಮೈಕೆಲ್ ಪೆಪ್ಪರ್ ಅವರ ಅದ್ಭುತ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಸ್ಟೀಫನ್ ಕ್ರಾಫ್ಟ್ (76) ಹಾಗೂ ಡೇನ್ ವಿಲಾಸ್ (51) ಅವರ ಅರ್ಧಶತಕಗಳ ನೆರವಿನಿಂದ ಲಂಕಾಶೈರ್ ತಂಡವು 16ನೇ ಓವರ್ನಲ್ಲಿ 162 ರನ್ಗಳ ಗುರಿಮುಟ್ಟುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲಂಕಾಶೈರ್ ತಂಡವು ಟಿ20 ಬ್ಲಾಸ್ಟ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
Published On - 1:25 pm, Sat, 9 July 22