
ಇಂಗ್ಲೆಂಡ್ ವಿರುದ್ದ ಆಗಸ್ಟ್ 4 ರಿಂದ ಶುರುವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಮತ್ತೊಮ್ಮೆ ಆಘಾತ ಎದುರಾಗಿದೆ. ಈ ಮೊದಲು ಆರಂಭಿಕ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಅಭ್ಯಾಸ ಪಂದ್ಯದ ವೇಳೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ಹೆಚ್ಚುವರಿ ಬೌಲರ್ ಅವೇಶ್ ಖಾನ್ ಗಾಯಗೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಭಾರತ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ನಡುವೆ ನಡೆದ 3 ದಿನಗಳ ಅಭ್ಯಾಸ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಹಾಗೂ ಅವೇಶ್ ಖಾನ್ ಕೂಡ ಕಣಕ್ಕಿಳಿದಿದ್ದರು. ಆದರೆ ಇವರಿಬ್ಬರು ಎದುರಾಳಿ ತಂಡ ಕೌಂಟಿ ಸೆಲೆಕ್ಟ್ ಪರ ಆಡಿದ್ದರು. ಇದೇ ವೇಳೆ ಸುಂದರ್ ಗಾಯಗೊಂಡಿದ್ದಾರೆ. ಹಾಗೆಯೇ ಚೆಂಡು ತಗುಲಿ ಅವೇಶ್ ಖಾನ್ ಅವರ ಹೆಬ್ಬೆರಳು ಮುರಿದಿದ್ದು, ಹೀಗಾಗಿ ನೆಟ್ಸ್ನಲ್ಲಿ ಬೌಲಿಂಗ್ ಮಾಡುವುದು ಅಸಾಧ್ಯ ಎನ್ನಲಾಗಿದೆ.
ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದ ವೇಳೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಕೌಂಟಿ ಸೆಲೆಕ್ಟ್ ತಂಡದ ಆಟಗಾರರಾದ ಜೇಮ್ಸ್ ಬ್ರೇಸಿ ಮತ್ತು ಝಾಕ್ ಚಾಪೆಲ್‌ಗೆ ಬದಲಿಯಾಗಿ ತಮ್ಮ ಆಟಗಾರರನ್ನು ಕಣಕ್ಕಿಳಿಸುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಅದರಂತೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯದ ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಭಾರತ ವಿರುದ್ಧ ಕೌಂಟಿ ಇಲೆವೆನ್ ಪ್ರತಿನಿಧಿಸಿದ್ದರು. ಇದೀಗ ಈ ಇಬ್ಬರು ಗಾಯಗೊಂಡಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.
ಈಗಾಗಲೇ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಇದೀಗ ಸುಂದರ್-ಅವೇಶ್ ಕೂಡ ಗಾಯಗೊಂಡಿದ್ದಾರೆ. ಈ ಇಬ್ಬರು ಆಟಗಾರರ ಗಾಯದ ಗಂಭೀರತೆಯನ್ನು ಪರಿಗಣಿಸಿ ಇಂಗ್ಲೆಂಡ್ ಬದಲಿ ಆಟಗಾರರನ್ನು ಕರೆಸಿಕೊಳ್ಳಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಭಾರತ ತಂಡದ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 4 ರಿಂದ 8ವರೆಗೆ ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ 2ನೇ ಪಂದ್ಯವು 12 ರಿಂದ 16 ರವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. 3ನೇ ಟೆಸ್ಟ್ ಪಂದ್ಯವು 25 ರಿಂದ 29 ರವರೆಗೆ ಹೆಡಿಂಗ್ಲೆ ಮೈದಾನದಲ್ಲಿ ಜರುಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸೆಪ್ಟೆಂಬರ್ 2 ರಿಂದ ಚಾಲನೆ ದೊರೆಯಲಿದ್ದು, ಅಂತಿಮ ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಸೆಪ್ಟೆಂಬರ್ 10 ರಿಂದ 14ರವರೆಗೆ ನಡೆಯಲಿದೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್
Published On - 4:19 pm, Thu, 22 July 21