ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ಸ್ ಟ್ರೋಫಿಯ ನಡುವೆ ಕೇಳಿ ಬಂದ ಅತೀ ದೊಡ್ಡ ಅಪಸ್ವರವೆಂದರೆ ಈ ಬಾರಿ ಭಾರತ ತಂಡಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂಬುದು. ಅಂದರೆ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯದಲ್ಲಿ ದುಬೈನಲ್ಲಿ ಆಡಿರುವುದು ಪ್ರಯೋಜನಕಾರಿಯಾಗಿದೆ. ಹೀಗಾಗಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲಾ ಆರೋಪಗಳಿಗೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಖಡಕ್ ಉತ್ತರ ನೀಡಿದ್ದಾರೆ.
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ವಾಸಿಂ ಅಕ್ರಮ್, ಭಾರತ ತಂಡ ಎಲ್ಲೇ ಆಡಿದ್ದರೂ ಅವರು ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದರು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಇತರ ತಂಡಗಳಂತೆ ಅವರು ಪಾಕಿಸ್ತಾನದಲ್ಲಿ ಆಡಿದ್ದರೂ ಅವರೇ ಚಾಂಪಿಯನ್ ಆಗುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನ ಇಲ್ಲ.
ಹೀಗೆ ಆರೋಪಗಳನ್ನು ಹೊರಿಸುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ ಎಂಬುದು. ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಅಜೇಯರಾಗಿಯೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅಲ್ಲಿನ ಪಿಚ್ಗಳು ಅವರಿಗೆ ಅನುಕೂಲಕರವಾಗಿತ್ತೇ ಎಂದು ವಾಸಿಂ ಅಕ್ರಮ್ ಪ್ರಶ್ನಿಸಿದ್ದಾರೆ.
ಭಾರತ ತಂಡವು ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅದೇ ಪ್ರದರ್ಶನವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸಿದ್ದಾರೆ. ಅವರಿನ್ನು ಪಾಕಿಸ್ತಾನದಲ್ಲೂ ಆಡಿದ್ದರೂ ಇದೇ ಪ್ರದರ್ಶನ ನೀಡುತ್ತಿದ್ದರು. ಎಲ್ಲರನ್ನು ಸೋಲಿಸಿ ಕಪ್ ಗೆಲ್ಲುತ್ತಿದ್ದರು. ಹೀಗಾಗಿ ಟೀಮ್ ಇಂಡಿಯಾಗೆ ಅನುಕೂಲಕರವಾಗಿದೆ ಅಥವಾ ಪಿಚ್ನ ಪ್ರಯೋಜನ ಪಡೆದಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಅಕ್ರಮ್ ಹೇಳಿದ್ದಾರೆ.
ಒಂದು ತಂಡವು ಅವರು ಆಡುವ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ಅವರೆಷ್ಟು ಬಲಿಷ್ಠರಾಗಿದ್ದಾರೆ ಎಂಬುದನ್ನು. ಇದು ಟೀಮ್ ಇಂಡಿಯಾದ ಆಳ ಮತ್ತು ಅವರ ನಾಯಕತ್ವದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಎಲ್ಲೇ ಆಡಿದ್ದರೂ ಅವರೇ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದರು ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: RCB ಸ್ಟೆಡಿನಾ? ಕಂಬ್ಯಾಕ್ಗೆ ಜಸ್ಪ್ರೀತ್ ಬುಮ್ರಾ ರೆಡಿ
ಈ ಮೂಲಕ ಇಡೀ ಟೂರ್ನಿಯನ್ನು ದುಬೈನಲ್ಲಿ ಆಡಿದ ಭಾರತ ತಂಡಕ್ಕೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಆರೋಪಗಳನ್ನು ವಾಸಿಂ ಅಕ್ರಮ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ 2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನವನ್ನು ಉಲ್ಲೇಖಿಸಿ ಟೀಕಾಕಾರರಿಗೆ ಖಡಕ್ ಉತ್ತರವನ್ನು ಸಹ ನೀಡಿದ್ದಾರೆ.