ಸೋಲಿನ ಬೆನ್ನಲ್ಲೇ ಬೆದರಿಕೆಗಳು ಬಂದವು, ಬೈಕ್‌ನಲ್ಲಿ ನನ್ನನ್ನು ಬೆನ್ನಟ್ಟಿದ್ದರು..!
Varun chakravarthy: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ವರುಣ್ ಚಕ್ರವರ್ತಿ ಕೂಡ ಒಬ್ಬರು. ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವರುಣ್ ಒಟ್ಟು 9 ವಿಕೆಟ್ ಕಬಳಿಸಿ ಭಾರತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೇ ವರುಣ್ ಅವರು 2021ರ ಟಿ20 ವಿಶ್ವಕಪ್ ವೇಳೆ ಅಭಿಮಾನಿಗಳಿಗೆ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದೇ ಅಚ್ಚರಿ.

ಟೀಮ್ ಇಂಡಿಯಾದ ಹೊಸ ಸ್ಪಿನ್ ಸೆನ್ಸೇಷನ್ ಯಾರೆಂದು ಕೇಳಿದರೆ ಸದ್ಯ ಸಿಗುವ ಉತ್ತರ ವರುಣ್ ಚಕ್ರವರ್ತಿ. ಆದರೆ ಇದೇ ವರುಣ್ ಟೀಮ್ ಇಂಡಿಯಾ ಪರ ಮೂರು ವರ್ಷಗಳ ಹಿಂದೆಯೇ ಪಾದಾರ್ಪಣೆ ಮಾಡಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಯುಎಇನಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಭಾರತದ ಪರ ಚೊಚ್ಚಲ ಪಂದ್ಯವಾಡಿದ್ದರು.
ಆದರೆ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 33 ರನ್ ನೀಡಿದ್ದ ವರುಣ್ ಚಕ್ರವರ್ತಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಇನ್ನು ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ 4 ಓವರ್ಗಳಲ್ಲಿ 23 ರನ್ ನೀಡಿದರೂ ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ. ಹಾಗೆಯೇ ಸ್ಕಾಟ್ಲೆಂಟ್ ವಿರುದ್ಧದ ಪಂದ್ಯದಲ್ಲೂ ವಿಕೆಟ್ ಕಬಳಿಸುವಲ್ಲಿ ವಿಫಲರಾದರು.
ಹೀಗೆ ಟೀಮ್ ಇಂಡಿಯಾ ಪಾಲಿನ ನಿರ್ಣಾಯಕ ಪಂದ್ಯಗಳಲ್ಲಿ ವರುಣ್ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಇದರಿಂದ ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಪರಿಣಾಮ ವಿಶ್ವಕಪ್ನ ಸೋಲಿನ ಬೆನ್ನಲ್ಲೇ ವರುಣ್ ಚಕ್ರವರ್ತಿ ಅವರಿಗೆ ಬೆದಿಕೆ ಕರೆಗಳು ಬರಲಾಂಭಿಸಿದ್ದವು.
ಈ ವಿಚಾರವನ್ನು ಖುದ್ದು ವರುಣ್ ಚಕ್ರವರ್ತಿಯೇ ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರುಣ್, ಅದು ನನಗೆ ತುಂಬಾ ಕೆಟ್ಟ ಸಮಯವಾಗಿತ್ತು. ವಿಶ್ವಕಪ್‌ಗೆ ಆಯ್ಕೆಯಾಗಿಯೂ ನಾನು ನ್ಯಾಯ ಒದಗಿಸಿಲ್ಲ ಎಂದು ನನಗೆ ಅನಿಸಿತು. ಇದರಿಂದ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ.
ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದಿದ್ದಕ್ಕೆ ನನಗೆ ತುಂಬಾ ಬೇಸರವಾಯಿತು. ಅದಾದ ನಂತರ ಮೂರು ವರ್ಷಗಳ ಕಾಲ ನಾನು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಲಿಲ್ಲ. ಚೊಚ್ಚಲ ಪಂದ್ಯಕ್ಕಿಂತ ಪುನರಾಗಮನದ ಹಾದಿ ನನಗೆ ಹೆಚ್ಚು ಕಷ್ಟಕರವಾಗಿತ್ತು. ಮತ್ತೆ ಚಾನ್ಸ್ ಸಿಗುತ್ತದೆ ಎಂಬುದರ ಮೇಲೆ ನಂಬಿಕೆಯೂ ಹೋಗಿತ್ತು.
ಏಕೆಂದರೆ 2021ರ ವಿಶ್ವಕಪ್ ನಂತರ ನನಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದವು. ಭಾರತಕ್ಕೆ ಬರಬೇಡಿ ಎಂದು ಕರೆ ಮಾಡಿ ಹೇಳುತ್ತಿದ್ದರು. ಜನರು ನನ್ನನ್ನು ಹುಡುಕಿ ಮನೆಗೆ ಬರುತ್ತಿದ್ದರು. ಕೆಲವರು ನನ್ನನ್ನು ಹಿಂಬಾಲಿಸುತ್ತಿದ್ದರು. ಇದರಿಂದ ಹಲವು ಬಾರಿ ನಾನು ಅಡಗಿಕೊಳ್ಳಬೇಕಾಯಿತು.
ಇದನ್ನೂ ಓದಿ: IPL 2025: RCB ಸ್ಟೆಡಿನಾ? ಕಂಬ್ಯಾಕ್ಗೆ ಜಸ್ಪ್ರೀತ್ ಬುಮ್ರಾ ರೆಡಿ
ಅದರಲ್ಲೊಮ್ಮೆ, ನಾನು ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದಾಗ ಕೆಲವರು ನನ್ನನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದರು. ಇದರಿಂದೆಲ್ಲಾ ನಾನು ತುಂಬಾ ಭಯಭೀತನಾಗಿದ್ದೆ. ಆದರೀಗ ಎಲ್ಲವೂ ಬದಲಾಗಿದೆ. ನನಗೆ ಸಿಗುತ್ತಿರುವ ಮೆಚ್ಚುಗೆಯನ್ನು ನೋಡಿದಾಗ, ತುಂಬಾ ಸಂತೋಷವಾಗುತ್ತದೆ ಎಂದು ವರುಣ್ ಚಕ್ರವರ್ತಿ ಹೇಳಿದ್ದಾರೆ.