T20 World Cup 2024: ಈ ಬಾರಿಯ ಟಿ20 ವಿಶ್ವಕಪ್ ಹಲವು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಈ ಅಚ್ಚರಿಗಳ ನಡುವೆ ಬಲಿಷ್ಠರನ್ನೇ ಬಗ್ಗು ಬಡಿದು ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ. ಆದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೇರಲಿದೆ ಎಂದು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಭವಿಷ್ಯ ನುಡಿದಿದ್ದರು ಎಂಬುದು ವಿಶೇಷ. ಹಲವು ಮಾಜಿ ಕ್ರಿಕೆಟಿಗರು ಸೆಮಿಫೈನಲ್ಗೆ ಪ್ರವೇಶಿಸುವ 4 ತಂಡಗಳ ಪಟ್ಟಿಯಲ್ಲಿ ಬಲಿಷ್ಠ ಪಡೆಗಳನ್ನೇ ಹೆಸರಿಸಿದ್ದರು. ಆದರೆ ಬ್ರಿಯಾನ್ ಲಾರಾ ಹೆಸರಿಸಿದ ನಾಲ್ಕು ತಂಡಗಳಲ್ಲಿ ಅಫ್ಘಾನಿಸ್ತಾನ್ ಕೂಡ ಇತ್ತು. ಅಂದು ಅವರ ಆಯ್ಕೆ ಬಗ್ಗೆ ಅನೇಕರು ಅಚ್ಚರಿಯನ್ನು ಸಹ ವ್ಯಕ್ತಪಡಿಸಿದ್ದರು.
ಆದರೀಗ ಬ್ರಿಯಾನ್ ಲಾರಾ ಅವರ ಭವಿಷ್ಯ ನಿಜವಾಗಿದೆ. ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಹಂತಕ್ಕೇರಿದೆ. ಈ ಮೂಲಕ ಕ್ರಿಕೆಟ್ ದಿಗ್ಗಜನ ಊಹೆಯನ್ನು ನಿಜವಾಗಿಸಿದ್ದಾರೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಫ್ಘಾನಿಸ್ತಾನ್ ಸೆಮಿಫೈನಲ್ಗೆ ಪ್ರವೇಶಿಸಲಿದೆ ಎಂದು ಬ್ರಿಯಾನ್ ಲಾರಾ ನೀಡಿದ ಹೇಳಿಕೆಯನ್ನು ಅಫ್ಘಾನ್ ಆಟಗಾರರು ಕೂಡ ಗಮನಿಸಿದ್ದರು. ಅಲ್ಲದೆ ವಿಶ್ವಕಪ್ ಸಮಾರಂಭದಲ್ಲಿ ಲಾರಾ ಅವರನ್ನು ಭೇಟಿಯಾಗಿದ್ದ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್ ನಿಮ್ಮ ಆಯ್ಕೆ ಸರಿ ಇದೆ ಎಂಬುದನ್ನು ನಾವು ನಿರೂಪಿಸುತ್ತೇವೆ ಎಂದು ಮಾತು ಕೊಟ್ಟಿದ್ದರು.
ಈ ಬಗ್ಗೆ ಮಾತನಾಡಿರುವ ರಶೀದ್ ಖಾನ್, ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ ಎಂದು ಹೇಳಿದ ಏಕೈಕ ವ್ಯಕ್ತಿ ಬ್ರಿಯಾನ್ ಲಾರಾ. ನಾವು ಅವರನ್ನು ಸ್ವಾಗತ ಸಮಾರಂಭದಲ್ಲಿ ಭೇಟಿಯಾದಾಗ, ನಾವು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ಅವರಿಗೆ ಹೇಳಿದ್ದೆ. ಇದೀಗ ನಾವು ಹೇಳಿದಂತೆ ನಿರೂಪಿಸಿದ್ದೇವೆ. ಕ್ರಿಕೆಟ್ ದಿಗ್ಗಜನ ಹೇಳಿಕೆಯನ್ನು ಸಾಬೀತುಪಡಿಸಿದ್ದೇವೆ ಎಂದು ರಶೀದ್ ಖಾನ್ ಹೇಳಿದ್ದಾರೆ.
ಒಬ್ಬ ಲೆಜೆಂಡ್ ಆಟಗಾರನಿಂದ ಒಂದು ತಂಡವು ಶ್ರೇಷ್ಠವಾಗಿದೆ. ಅವರು ಸೆಮಿಫೈನಲ್ ಪ್ರವೇಶಿಸುತ್ತದೆ ಎಂಬ ಹೇಳಿಕೆ ಕೇಳಿದಾಗ, ಅದು ನಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಅದಕ್ಕೆ ನಾವು ಸಮರ್ಥರಾಗಿದ್ದೇವೆ ಎಂಬ ನಂಬಿಕೆ ಮೂಡುತ್ತದೆ. ಅದರಂತೆ ಬ್ರಿಯಾನ್ ಲಾರಾ ಅವರ ಹೇಳಿಕೆಯು ನಮ್ಮಲ್ಲಿ ಹೊಸ ವಿಶ್ವಾಸ ಮೂಡಿಸಿತ್ತು. ಇದೀಗ ಅವರ ಹೇಳಿಕೆಯಂತೆ ನಾವು ಸೆಮಿಫೈನಲ್ಗೆ ಪ್ರವೇಶಿಸಿದ್ದೇವೆ ಎಂದು ರಶೀದ್ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IND vs ENG: ಇಂಗ್ಲೆಂಡ್ ತಂಡದ ಚಿಂತೆ ಹೆಚ್ಚಿಸಿದ 4 ಗಂಟೆ 16 ನಿಮಿಷಗಳು..!
ಬಾಂಗ್ಲಾದೇಶ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 20 ಓವರ್ಗಳಲ್ಲಿ 115 ರನ್ ಕಲೆಹಾಕಿತು. ಮಳೆಯ ಕಾರಣ 19 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ 114 ರನ್ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 105 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಅಫ್ಘಾನಿಸ್ತಾನ್ ತಂಡವು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 8 ರನ್ಗಳ ರೋಚಕ ಜಯ ಸಾಧಿಸಿದೆ.