ರಣರೋಚಕ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದ ವೆಸ್ಟ್ ಇಂಡೀಸ್
West Indies vs Pakistan: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ 14 ರನ್ಗಳ ಜಯ ಸಾಧಿಸಿತ್ತು. ಇದೀಗ ವೆಸ್ಟ್ ಇಂಡೀಸ್ ದ್ವಿತೀಯ ಪಂದ್ಯದಲ್ಲಿ 2 ವಿಕೆಟ್ಗಳ ಗೆಲುವು ದಾಖಲಿಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ವೆಸ್ಟ್ ಇಂಡೀಸ್ ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಫ್ಲೋರಿಡಾದ ಸಿಬಿಆರ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ವಿಂಡೀಸ್ ಪಡೆ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 21 ರನ್ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್ಗಳು ಪೆವಿಲಿಯನ್ನತ್ತ ಮುಖ ಮಾಡಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಅಲಿ ಅಘಾ 38 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಹಸನ್ ನವಾಝ್ 40 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಕಲೆಹಾಕಿತು.
134 ರನ್ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಮೊಹಮ್ಮದ್ ನವಾಝ್ ಆರಂಭಿಕ ಆಘಾತ ನೀಡಿದ್ದರು. 2ನೇ ಓವರ್ನ ಮೊದಲ ಎಸೆತದಲ್ಲೇ ಅಲಿಕ್ ಅಥನಾಝ್ (2) ವಿಕೆಟ್ ಪಡೆದು ಪಾಕ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜ್ಯುವೆಲ್ ಆ್ಯಂಡ್ರೊ (12) ಸಹ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಶೆರ್ಫೇನ್ ರದರ್ಫೋರ್ಡ್ ಕೇವಲ 9 ರನ್ಗಳಿಸಿ ಆಲೌಟ್ ಆದರು.
ಪರಿಣಾಮ ಪವರ್ಪ್ಲೇನಲ್ಲಿ ವೆಸ್ಟ್ ಇಂಡೀಸ್ ತಂಡ ಕಲೆಹಾಕಿದ್ದು ಕೇವಲ 34 ರನ್ಗಳು ಮಾತ್ರ. ಆದರೆ ಮಧ್ಯಮ ಕ್ರಮಾಂಕದಲ್ಲಿ ಗುಡಕೇಶ್ ಮೋಟಿ 28 ರನ್ ಬಾರಿಸುವ ಮೂಲಕ ತಂಡಕ್ಕೆ ಪಂದ್ಯ ಗೆಲ್ಲಿಸಿ ಕೊಡುವ ಭವರಸೆ ಮೂಡಿಸಿದರು. ಅದರಂತೆ ಕೊನೆಯ 4 ಓವರ್ಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 39 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ಜೊತೆಗೂಡಿದ ಜೇಸನ್ ಹೋಲ್ಡರ್ ಹಾಗೂ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 18ನೇ ಓವರ್ನಲ್ಲಿ 12 ರನ್ಗಳು ಮೂಡಿಬಂದವು. ಇನ್ನು 19ನೇ ಓವರ್ನಲ್ಲಿ 16 ರನ್ ಚಚ್ಚಿದರು. ಅದರಂತೆ ಕೊನೆಯ ಓವರ್ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 8 ರನ್ಗಳ ಅವಶ್ಯಕತೆಯಿತ್ತು.
ಶಾಹೀನ್ ಶಾ ಅಫ್ರಿದಿ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಹೋಲ್ಡರ್ 1 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ರೊಮಾರಿಯೊ ಶೆಫರ್ಡ್ (15) ಔಟಾದರು. 3ನೇ ಎಸೆತದಲ್ಲಿ ಶಮರ್ ಜೋಸೆಫ್ 1 ರನ್ಗಳಿಸಿದರು. 4ನೇ ಎಸೆತದಲ್ಲಿ ಹೋಲ್ಡರ್ ಬ್ಯಾಟ್ನಿಂದ ಮತ್ತೊಂದು ರನ್. 5ನೇ ಎಸೆತದಲ್ಲಿ ಶಮರ್ ಒಂದು ರನ್ ಓಡುವಲ್ಲಿ ಯಶಸ್ವಿಯಾದರು.
ಅದರಂತೆ ಅಂತಿಮ ಎಸೆತದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 4 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಶಾಹೀನ್ ಅಫ್ರಿದಿ ವೈಡ್ ಎಸೆದರು. ಒಂದು ಎಸೆತದಲ್ಲಿ ಮೂರು ರನ್ಗಳ ಅವಶ್ಯಕತೆ. ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಜೇಸನ್ ಹೋಲ್ಡರ್ (16) ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸತತ ಸೋಲುಗಳ ಸರಪಳಿಯನ್ನು ಮುರಿದಿದೆ.
ಇದನ್ನೂ ಓದಿ: ಆರ್ಚರ್ ಅಲ್ಲ… ಇಂಗ್ಲೆಂಡ್ ಪರ ಕಣಕ್ಕಿಳಿದ ತಂಡದಲ್ಲಿರದ ಆಟಗಾರ
ಅಂದರೆ ಕಳೆದ 6 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸೋಲನುಭವಿಸಿತ್ತು. ಇದೀಗ 7ನೇ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸುವಲ್ಲಿ ವೆಸ್ಟ್ ಇಂಡೀಸ್ ತಂಡ ಯಶಸ್ವಿಯಾಗಿದೆ.
