ಐಸಿಸಿ ಟಿ20 ವಿಶ್ವಕಪ್ (T20 World Cup) ಸೂಪರ್ 12 ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಭಾರತ ಹಾಗೂ ಜಿಂಬಾಬ್ವೆ (India vs Zimbabwe) ನಡುವೆ ಕೊನೆಯ ಪಂದ್ಯ ನಡೆಯುವ ಮೂಲಕ ಸೆಮಿ ಫೈನಲ್ಗೆ ಯಾವ ತಂಡ ಎಂಬುದು ಅಂತಿಮವಾಗಲಿದೆ. ಟೀಮ್ ಇಂಡಿಯಾದ ಸೆಮೀಸ್ ಹಾದಿ ಕೂಡ ಇಲ್ಲೇ ನಿರ್ಧಾರವಾಗಲಿದೆ. ಪಾಯಿಂಟ್ ಟೇಬಲ್ ಗಮನಿಸುವುದಾದರೆ ಭಾರತ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದರೆ ಒಂದು ಪಂದ್ಯ ಸೋತು 6 ಅಂಕ ಸಂಪಾದಿಸಿದೆ. +0.730 ರನ್ರೇಟ್ ಹೊಂದಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ- ಜಿಂಬಾಬ್ವೆ ಪಂದ್ಯ ಆಯೋಜಿಸಲಾಗಿದ್ದು, ರೋಹಿತ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಮ್ಯಾಚ್. ಆದರೆ, ಈ ನಿರ್ಣಾಯ ಕದನಕ್ಕೆ ವರುಣ ಅಡ್ಡಿಪಡಿಸುತ್ತಾ?. ಎಲ್ಲಾದರು ಮಳೆ ಬಂದು ಪಂದ್ಯ ರದ್ದಾದರೆ ರೋಹಿತ್ (Rohit Sharma) ಪಡೆಯ ಭವಿಷ್ಯವೇನು? ಎಂಬುದನ್ನು ನೋಡೋಣ.
ಮೆಲ್ಬೋರ್ನ್ ಹವಮಾನ ವರದಿ:
ನವೆಂಬರ್ 6ರ ಭಾನುವಾರದಂದು ಹವಾಮಾನವು ಸ್ಪಷ್ಟವಾದೆ. ಪಂದ್ಯದ ಹಿಂದಿನ ದಿನ ರಾತ್ರಿ ಮೆಲ್ಬೋರ್ನ್‌ನಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಜಿಂಬಾಬ್ವೆ ವಿರುದ್ಧದ ಭಾರತದ ಪಂದ್ಯದ ವೇಳೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಮಳೆಯಿಂದಾಗಿ ಕಳೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಕೆಲಕಾಲ ನಿಲ್ಲಿಸಬೇಕಾಯಿತು. ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಪಂದ್ಯವು ಇದರ ಪರಿಣಾಮಕ್ಕೆ ಒಳಗಾಗಿತ್ತು. ಆದರೀಗ ಭಾರತ-ಜಿಂಬಾಬ್ವೆ ನಡುವೆ ಪೂರ್ಣ ಪಂದ್ಯ ನಡೆಯಲಿದ್ದು ವರುಣ ಅಡ್ಡಿಪಡಿಸುವ ಲಕ್ಷಣ ಇಲ್ಲ ಎನ್ನಲಾಗಿದೆ.
ಮಳೆ ಬಂದರೆ ಏನು ಗತಿ?:
ಐಸಿಸಿ ನಿಯಮದ ಪ್ರಕಾರ ಟಿ20 ವಿಶ್ವಕಪ್ನಲ್ಲಿ ಮಳೆಯಿಂದಾಗಿ ಪಂದ್ಯ ಟಾಸ್ ಕೂಡ ಕಾಣದೆ ರದ್ದಾದರೆ ಎರಡೂ ತಂಡಗಳು ಒಂದು ಅಂಕಗಳನ್ನು ಹಂಚಿಕೊಳ್ಳಲಿವೆ. ಹೀಗಾಗಿ ಸದ್ಯ 6 ಅಂಕಗಳನ್ನು ಪಡೆದುಕೊಂಡಿರುವ ಭಾರತ ತಂಡಕ್ಕೆ ಇನ್ನೊಂದು ಪಾಯಿಂಟ್ ಸಿಕ್ಕರೂ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಆದರೆ, ಈ ಪಂದ್ಯದಲ್ಲಿ ಸೋತರಷ್ಟೆ ಭಾರತಕ್ಕೆ ಟೆನ್ಶನ್. ಅತ್ತ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೂ ತಮ್ಮ ತಮ್ಮ ಕೊನೇ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಪಾಕ್ ಬಾಂಗ್ಲಾ ವಿರುದ್ಧ ಗೆದ್ದು, ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತರೆ ಪಾಕ್ ತಂಡ ಸೆಮಿಫೈನಲ್ ಟಿಕೆಟ್ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ಕೊನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ದ ಸೋತರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನೇರವಾಗಿ ಸೆಮೀಸ್ಗೆ ಪ್ರವೇಶಿಸಲಿದೆ.
ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕೆಎಲ್ ರಾಹುಲ್ ಕೂಡ ಲಯ ಕಂಡುಕೊಂಡಿರುವುದು ಸಂತಸದ ವಿಚಾರ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇವರು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ, ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಸದ್ದು ಮಡುತ್ತಿಲ್ಲ. ದಿನೇಶ್ ಕಾರ್ತಿಕ್ ಕೂಡ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಅರ್ಶ್ದೀಪ್ ಸಿಂಗ್ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಭುವನೇಶ್ವರ್, ಶಮಿ ಕೂಡ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ನರ್ಗಳ ಬೆಂಬಲ ಇನ್ನಷ್ಟು ಬೇಕಿದೆ.
ಅಭ್ಯಾಸ ಆರಂಭ:
ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಈಗಾಗಲೇ ಮೆಲ್ಬೋರ್ನ್ಗೆ ಬಂದಿಳಿದಿದೆ. ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಯುಜ್ವೇಂದ್ರ ಚಹಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು ‘ಟ್ರಾವೆಲ್ ಟು ಮೆಲ್ಬೋರ್ನ್’ ಎಂದು ಬರೆದುಕೊಂಡಿದ್ದಾರೆ. ಪಂದ್ಯದ ಹಿಂದಿನ ದಿನ ಶನಿವಾರ ನೆಟ್ನಲ್ಲಿ ಆಟಗಾರರು ಬೆವರು ಹರಿಸಲಿದ್ದಾರೆ. ಪ್ರಮುಖ ಪಂದ್ಯ ಆಗಿರುವುದರಿಂದ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮ, ಹಾರ್ದಿಕ್ ಹಾಗೂ ಕಾರ್ತಿಕ್ ಕಠಿಣ ಅಭ್ಯಾಸ ನಡೆಸಲಿದ್ದಾರೆ.
Published On - 9:44 am, Sat, 5 November 22