Team India: ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ 3 ಪ್ರಮುಖ ಬದಲಾವಣೆ..!
India Squad For T20 World Cup 2022: ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ 15 ಸದಸ್ಯರ ತಂಡದ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಹೀಗಾಗಿ ಇನ್ಮುಂದೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
T20 World Cup 2022: ಟಿ20 ವಿಶ್ವಕಪ್ಗಾಗಿ ಕೌಂಟ್ ಡೌನ್ ಶುರುವಾದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲೂ (Team India) ಕೆಲ ಬದಲಾವಣೆಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಆಟಗಾರರ ಗಾಯದ ಸಮಸ್ಯೆ. ಈ ಹಿಂದೆ ಟಿ20 ವಿಶ್ವಕಪ್ ಆಯ್ಕೆಯ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಇನ್ನೊಂದೆಡೆ ಟಿ20 ವಿಶ್ವಕಪ್ ತಂಡದ ಪ್ರಕಟಗೊಂಡ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ ಇನ್ನೇನು ಭಾರತ ತಂಡ ವಿಶ್ವಕಪ್ಗಾಗಿ ತೆರಳಲಿದೆ ಅನ್ನುವಷ್ಟರಲ್ಲಿ ದೀಪಕ್ ಚಹರ್ ಕೂಡ ಗಾಯಗೊಂಡರು. ಇದರಿಂದ 19 ಸದಸ್ಯರ ಬಳಗದಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಿವೆ.
ಅದರಂತೆ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಶಮಿ ಟಿ20 ವಿಶ್ವಕಪ್ಗಾಗಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಆದರೀಗ ಶಮಿ ಮುಖ್ಯ ತಂಡಕ್ಕೆ ಸೇರ್ಪಡೆಗೊಂಡ ಕಾರಣ ಬದಲಿ ಮೀಸಲು ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇಲ್ಲಿ ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ಮೀಸಲು ಆಟಗಾರನಾಗಿ ಮೊಹಮ್ಮದ್ ಸಿರಾಜ್ 19ರ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಗಾಯದ ಕಾರಣ ತಂಡದಿಂದ ಹೊರಬಿದ್ದಿರುವ ಮತ್ತೋರ್ವ ಮೀಸಲು ಆಟಗಾರ ದೀಪಕ್ ಚಹರ್ ಬದಲಿಗೆ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದಾರೆ.
ಈಗಾಗಲೇ ಬುಮ್ರಾ ಸ್ಥಾನದಲ್ಲಿ ಕಣಕ್ಕಿಳಿಯಲು ಮೊಹಮ್ಮದ್ ಶಮಿ ಆಸ್ಟ್ರೇಲಿಯಾಗೆ ತಲುಪಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಶೀಘ್ರದಲ್ಲೇ ಕಾಂಗರೂನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯ ಮೂಲಕ ತಿಳಿಸಿದೆ.
ಅಂದರೆ ಈ ಬಾರಿ ಟೀಮ್ ಇಂಡಿಯಾ ಒಟ್ಟು 19 ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದು, ಅವರಲ್ಲಿ 15 ಮಂದಿ ಮುಖ್ಯ ತಂಡದಲ್ಲಿದ್ದಾರೆ. ಇನ್ನುಳಿದ ನಾಲ್ವರು ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ಇನ್ನು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮುಖ್ಯ ತಂಡದಿಂದ ಯಾವುದಾದರು ಆಟಗಾರರು ಗಾಯಗೊಂಡು ಹೊರಬಿದ್ದರೆ, ಮೀಸಲು ಆಟಗಾರರ ಪಟ್ಟಿಯಲ್ಲಿರುವ ಪ್ಲೇಯರ್ಸ್ ಅವಕಾಶ ಸಿಗಲಿದೆ.
ಫೈನಲ್ ಪಟ್ಟಿ ಸಲ್ಲಿಕೆ:
ಐಸಿಸಿ ನಿಯಮದಂತೆ ಅಕ್ಟೋಬರ್ 15 ರೊಳಗೆ ಎಲ್ಲಾ ತಂಡಗಳು ತಮ್ಮ 15 ಸದಸ್ಯರ ಆಟಗಾರರ ಪಟ್ಟಿಯನ್ನು ಸಲ್ಲಿಸಿದೆ. ಹೀಗಾಗಿ ಇನ್ಮುಂದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ಯಾವುದಾದರು ಆಟಗಾರರು ಗಾಯಗೊಳ್ಳಬೇಕು ಅಥವಾ ಇನ್ನಿತರ ಅನಿವಾರ್ಯ ಕಾರಣಗಳಿಂದ ಹೊರಗುಳಿಯಬೇಕಾಗುತ್ತದೆ. ಅದರಂತೆ ಟೀಮ್ ಇಂಡಿಯಾ ಸಲ್ಲಿಸಿರುವ ಅಂತಿಮ 15 ಸದಸ್ಯರ ಬಳಗವು ಈ ಕೆಳಗಿನಂತಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್
Published On - 6:55 pm, Sat, 15 October 22