ಸೌರವ್ ಗಂಗೂಲಿ ಪ್ರಬುದ್ಧತೆ ತೋರಿಸಬೇಕೇ ಹೊರತು, ಕೊಹ್ಲಿಗೆ ನೋಟಿಸ್ ನೀಡುವುದಲ್ಲ..!
ಸೆಂಚುರಿಯನ್ ಗೆಲುವಿನ ಬೆನ್ನಲ್ಲೇ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ಗಂಗೂಲಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು. ಮಂಡಳಿಯಲ್ಲಿ ಪ್ರತಿಯೊಬ್ಬರೂ ಟಿ20 ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೊಹ್ಲಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಭಾರತ ಕ್ರಿಕೆಟ್ ತಂಡ ಕಂಡಂತಹ ಯಶಸ್ವಿ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಅದರಲ್ಲೂ ಮ್ಯಾಚ್ ಫಿಕ್ಸಿಂಗ್ನಿಂದಾಗಿ ಅಧಃಪತನದತ್ತ ಸಾಗಿದ್ದ ಟೀಮ್ ಇಂಡಿಯಾವನ್ನು ಕಟ್ಟಿ ಬೆಳೆಸಿದ ಕೀರ್ತಿ ದಾದಾನಿಗೆ ಸಲ್ಲುತ್ತದೆ. ಹೀಗೆ ಬಲಿಷ್ಠ ಭಾರತ ತಂಡವನ್ನು ಕಟ್ಟಿದ ಸೌರವ್ ಗಂಗೂಲಿ ಇದೀಗ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷರಾಗುವ ಮೊದಲು ಗಂಗೂಲಿ ಒಬ್ಬರು ಕ್ರಿಕೆಟಿಗರಾಗಿದ್ದರು. ಅದರಲ್ಲೂ ಹಲವು ವಿವಾದಗಳನ್ನು, ಅಡೆ ತಡೆಗಳನ್ನು ದಾಟಿ ಮುನ್ನುಗ್ಗಿದ್ದರು ಎಂಬುದು ಇದೀಗ ಖುದ್ದು ಗಂಗೂಲಿಯೇ ಮರೆತಂತಿದೆ. ಏಕೆಂದರೆ ಗಂಗೂಲಿ ಸವೆಸಿದ ಹಾದಿಯಲ್ಲೇ ವಿರಾಟ್ ಕೊಹ್ಲಿ ಕೂಡ ನಡೆದಿದ್ದರು. ಅದೇ ಆಕ್ರಮಣಕಾರಿ ದೋರಣೆ, ಯಾವುದೇ ತಂಡದ ವಿರುದ್ದ ಎದೆಯೊಡ್ಡಿ ನಿಲ್ಲುವಂತಹ ಧೈರ್ಯ…ಹೀಗೆ ಒಂದು ತಲೆಮಾರು ಸೌರವ್ ಗಂಗೂಲಿಯಲ್ಲಿ ಕಂಡಿದ್ದ ಅಗ್ರೆಸಿವ್ ಈ ತಲೆಮಾರಿನ ಕ್ರಿಕೆಟ್ ಪ್ರೇಮಿಗಳು ವಿರಾಟ್ ಕೊಹ್ಲಿಯಲ್ಲಿ ಕಂಡಿದ್ದರು.
ಹೀಗಾಗಿಯೇ ವಿರಾಟ್ ಕೊಹ್ಲಿ ನಡೆ ಹಾಗೂ ಸೌರವ್ ಗಂಗೂಲಿ ಅವರ ನಾಯಕತ್ವ ಸದಾ ಚರ್ಚಾ ವಿಷಯವಾಗಿರುತ್ತದೆ. ಅದರಲ್ಲೂ ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಹೇಗೆ ಆಡಬೇಕೆಂದು ತೋರಿಸಿಕೊಟ್ಟಿದ್ದೇ ಗಂಗೂಲಿ ನಾಯಕತ್ವ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತವೆ. ಅಷ್ಟೇ ಅಲ್ಲದೆ ತಂಡದ ನಾಯಕನೇ ಕಿಂಗ್ ಎಂಬುದನ್ನೂ ಸಹ ಗಂಗೂಲಿ ನಿರೂಪಿಸಿದ್ದರು. ಏಕೆಂದರೆ 2000 ರಲ್ಲಿ ನಾಯಕನಾದ ಸಮಯದಿಂದ 2005 ರವರೆಗೆ ಗಂಗೂಲಿ ಹೇಳಿದವರಿಗೆ ಕೋಚ್ ಸ್ಥಾನ ಸಿಗುತ್ತಿತ್ತು. ಇನ್ನು ತನಗೆ ಬೇಕಾದ ಆಟಗಾರರನ್ನೇ ಆಯ್ಕೆ ಮಾಡುವಂತೆ ದಾದಾ ಪಟ್ಟು ಹಿಡಿಯುತ್ತಿದ್ದರು.
ಇನ್ನು ಗಂಗೂಲಿ ಎಡವಿದ್ದು ಗ್ರೆಗ್ ಚಾಪೆಲ್ ಆಯ್ಕೆಯಲ್ಲಿ ಎಂದರೆ ತಪ್ಪಾಗಲಾರದು. ಆದರೆ ಅಷ್ಟರಲ್ಲಾಗಲೇ ಭಾರತೀಯ ಕ್ರಿಕೆಟ್ ಪ್ರವರ್ಧಮಾನಕ್ಕೆ ಬಂದಿತ್ತು. ಗಂಗೂಲಿ ಎಲ್ಲಾ ಆರಾಧನೆ, ಮೆಚ್ಚುಗೆ ಮತ್ತು ಪುರಸ್ಕಾರಗಳನ್ನು ಪಡೆದರು. ಆ ಅವಧಿಯಲ್ಲಿ ಅವರು ಭಾರತೀಯ ಕ್ರಿಕೆಟ್‌ನ ವ್ಯಕ್ತಿಯಾಗಿದ್ದರು. ಇದೇ ಕಾರಣದಿಂದಾಗಿ ಎರಡು ಕ್ರಿಕೆಟ್ ತಲೆಮಾರುಗಳ ನಂತರ, ಹೆಚ್ಚಿನ ಭಾರತೀಯರು ಸೌರವ್ ಗಂಗೂಲಿಯನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಆದರೆ ಇಂದಿನ ಜನರೇಷನ್ ವಿರಾಟ್ ಕೊಹ್ಲಿಯಲ್ಲಿ ಅಂತಹ ಆಕ್ರಮಣಕಾರಿ ಆಟವನ್ನು ನೋಡಿದ್ದಾರೆ.
ಇದಾಗ್ಯೂ ಭಾರತೀಯ ಕ್ರಿಕೆಟ್‌ನ ಬೆನ್ನೆಲು ಎಂಬ ಹಣೆಪಟ್ಟಿಯಿಂದ ಸೌರವ್ ಗಂಗೂಲಿ ಇನ್ನೂ ಕೂಡ ಹೊರಬಂದಿಲ್ಲವೇ ಎಂಬ ಅನುಮಾನಗಳು ಇತ್ತೀಚಿನ ಅವರ ನಡೆಗಳಿಂದ ಮೂಡುತ್ತವೆ. ಆದರೆ ಕೆಲವೊಮ್ಮೆ, ಭೂತಕಾಲವು ವರ್ತಮಾನದ ಮೇಲೆ ಹೊರೆಯಾಗಬಹುದು. ವಿಶೇಷವಾಗಿ ನೀವು ಅದನ್ನೆ ಶೋಕ್ತಿ ಎಂದು ಭಾವಿಸಿದಾಗ. ಇದನ್ನು ಯಾಕಾಗಿ ಹೇಳುತ್ತಿದ್ದೇವೆ ಅಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಗಂಗೂಲಿ ಅವರು ಈಗಲೂ ಕೂಡ ಆಟಗಾರನಾಗಿದ್ದ ಆಕ್ರಮಣಕಾರಿ ಧೋರಣೆಯಲ್ಲೇ ಉಳಿದುಕೊಂಡಿರುವಂತಿದೆ.
ಏಕೆಂದರೆ ಇತ್ತೀಚೆಗೆ ಮಾಧ್ಯಮ ಮುಂದೆ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ದ ನೀಡಿದ ಹೇಳಿಕೆಯಿಂದಾಗಿ, ಸೌರವ್ ಗಂಗೂಲಿ ಮುಜುಗರಕ್ಕೊಳಗಾಗಿದ್ದರು. ಇಲ್ಲಿ ಯಾರು ಬಾಸ್ ಯಾರು ಕಿಂಗ್ ಎಂಬ ಪ್ರಶ್ನೆಗಳು ಅಲ್ಲಿಂದಲೇ ಮೂಡಲಾರಂಭಿಸಿತು. ಇದೇ ಕಾರಣದಿಂದ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ನಡುವೆ ಶೀತಲ ಸಮರ ಏರ್ಪಟ್ಟಿದೆ ಎಂದು ಕೂಡ ಸುದ್ದಿಯಾಗಿತ್ತು.
ಇದನ್ನು ಪುಷ್ಠೀಕರಿಸುವಂತೆ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಗಂಗೂಲಿ ಮುಂದಾಗಿದ್ದರು ಎಂಬ ವಿಚಾರ ವಾರಗಳ ಹಿಂದೆಯಷ್ಟೇ ಬಹಿರಂಗವಾಗಿತ್ತು. ಅಂದರೆ ವಿರಾಟ್ ಕೊಹ್ಲಿಗೆ ಕೇಳಲಾದ ಪ್ರಶ್ನೆಗಳಿಗೆ ಅವರು ನೇರವಾಗಿ ಉತ್ತರಿಸಿದ್ದು ಬಿಸಿಸಿಐಗೆ ಪ್ರತಿಷ್ಠೆಯ ವಿಷಯವಾಯಿತು. ಹೀಗಾಗಿಯೇ ಬಿಸಿಸಿಐ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿತ್ತು. ಆದರೆ ಇಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ತೋರಿಸಬೇಕಿರುವುದು ಪ್ರಬುದ್ಧತೆಯೇ ಹೊರತು ಶೋಕಾಸ್ ನೋಟಿಸ್ ಅಲ್ಲ. ಏಕೆಂದರೆ ಇಂತಹ ಹಾದಿಗಳನ್ನು ಗಂಗೂಲಿ ಕೂಡ ದಾಟಿ ಬಂದಿದ್ದಾರೆ. ಅದಕ್ಕೆ ಅತ್ಯಂತ ದೊಡ್ಡ ಉದಾಹರಣೆ ಗ್ರೆಗ್ ಚಾಪೆಲ್ ನಡುವಣ ವಿವಾದ.
ಇದಾಗ್ಯೂ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿರುವುದು ಅಚ್ಚರಿಯೇ ಸರಿ. ಈ ಮೂಲಕ ವಿರಾಟ್ ಕೊಹ್ಲಿಯನ್ನು ಮತ್ತಷ್ಟು ದುರ್ಬಲಗೊಳಿಸಲು ಮುಂದಾಗಿದ್ದರು ಎಂಬುದಕ್ಕೆ ಶೋಕಾಸ್ ನೋಟಿಸ್ ವಿಚಾರವೇ ಸಾಕ್ಷಿ. ಇಲ್ಲಿ ಟೀಮ್ ಇಂಡಿಯಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಬಿಸಿಸಿಐ ಅಧ್ಯಕ್ಷರಾದಾಗ, ಅವರು ಸೂಕ್ಷ್ಮವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ ಆ ನಿರೀಕ್ಷೆಯಂತು ಸುಳ್ಳಾಗಿದೆ. ಇದಾಗ್ಯೂ ಗಂಗೂಲಿ ಗ್ರೆಗ್ ಚಾಪೆಲ್ ನಡುವಣ ವಿವಾದದಂತೆ ಇದನ್ನು ಬಹಿರಂಗಗೊಳ್ಳದಂತೆ ನೋಡಿಕೊಂಡಿದ್ದಾರೆ ಎನ್ನಬಹುದು. ಹೀಗಾಗಿಯೇ ಮೌಖಿಕ ಟಾರ್ಗೆಟ್ ಮತ್ತು ತೆರೆಮರೆಯಲ್ಲಿ ಕುತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಕ್ಕೆ ಸಾಕ್ಷಿಯೇ ದಕ್ಷಿಣ ಆಫ್ರಿಕಾ ಸರಣಿ. ಏಕೆಂದರೆ ಈ ಸರಣಿಯ ಆರಂಭವೇ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಣ ಶೀತಲ ಸಮರದಿಂದ ಶುರುವಾಗಿತ್ತು. ಒಂದೆಡೆ ಏಕದಿನ ನಾಯಕತ್ವದಿಂದ ಕಿತ್ತು ಹಾಕಿದರೂ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾ ಸರಣಿಗೆ ತೆರಳಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಗೆಲುವನ್ನು ನಿರೀಕ್ಷಿಸಿದ್ದ ಟೀಮ್ ಇಂಡಿಯಾ ಸರಣಿ ಸೋಲುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದರು.
ತಂಡದಲ್ಲಿನ ಬದಲಾವಣೆ ಬಗ್ಗೆ ಮಂಡಳಿಯ ಕಳಪೆ ನಿರ್ವಹಣೆಯು ಸೋಲಿಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಮೈದಾನದ ಹೊರಗೆ, ಭಾರತವು ಈ ಹಿಂದಿನ ತಂಡದಂತೆ ಕಾಣುತ್ತಿಲ್ಲ. ಡ್ರೆಸ್ಸಿಂಗ್ ರೂಮ್‌ನ ಗೌಪ್ಯತೆಯ ವಿಷಯದಲ್ಲೂ ಈಗ ಅನುಮಾನಗಳು ಮೂಡಲಾರಂಭಿಸಿದೆ. ಪ್ರಮುಖ ಸರಣಿಗೂ ಮೊದಲು ಮಾತಿನ ಚಕಮಕಿಗೆ ಕಾರಣವಾದ ಘಟನೆಗಳ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಗಂಗೂಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಇದು ತುಂಬಾ ದುರದೃಷ್ಟಕರ ವಿಷಯ. ಇದನ್ನು ಕ್ರಿಕೆಟ್ ಮಂಡಳಿಯು ಹೆಚ್ಚು ವೃತ್ತಿಪರವಾಗಿ ನಿರ್ವಹಿಸಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಗಂಗೂಲಿ ಅವರಿಗೆ ಆಯ್ಕೆ ಸಮಿತಿಯ ಪರವಾಗಿ ಮಾತನಾಡಲು ಯಾವುದೇ ಅವಕಾಶವಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ತಂಡದ ಯಾವುದೇ ಆಯ್ಕೆ ಅಥವಾ ನಾಯಕತ್ವ ಬಗ್ಗೆ ಆಯ್ಕೆ ಸಮಿತಿಯ ಅಧ್ಯಕ್ಷರು ಮಾತನಾಡಬೇಕು, ”ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಗ್‌ಸರ್ಕರ್ ಖಲೀಜ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಇದಾಗ್ಯೂ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಮಾಧ್ಯಮಗಳ ಕಠಿಣ ಪ್ರಶ್ನೆಗಳಿಂದ ದೂರ ಉಳಿಯಲಿಲ್ಲ. ಹೊಸ ಮುಖ್ಯ ಕೋಚ್ ತಂಡದ ಕುರಿತಾದ ಸುದ್ದಿಗೋಷ್ಠಿಗಳನ್ನು ನಾಜೂಕಾಗಿ ನಿಭಾಯಿಸಿದ್ದರು. ಇದರ ಬೆನ್ಲಲ್ಲೇ ಭಾರತವು ಸೆಂಚುರಿಯನ್‌ನಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಪ್ರಾರಂಭಿಸಿತು. ಆದರೆ ಈ ವೇಳೆ ಕೂಡ ಕೊಹ್ಲಿ vs ಗಂಗೂಲಿ ನಡುವಣ ಸುದ್ದಿಗಳು ಮಹತ್ವ ಪಡೆದುಕೊಂಡಿತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಏಕೆಂದರೆ ಸೆಂಚುರಿಯನ್ ಗೆಲುವಿನ ಬೆನ್ನಲ್ಲೇ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ಗಂಗೂಲಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು. ಮಂಡಳಿಯಲ್ಲಿ ಪ್ರತಿಯೊಬ್ಬರೂ ಟಿ20 ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೊಹ್ಲಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು. ಸೀಮಿತ ಓವರ್‌ಗಳ ತಂಡಕ್ಕೆ ಒಬ್ಬನೇ ನಾಯಕನನ್ನು ಆಯ್ಕೆ ಸಮಿತಿ ಬಯಸಿತ್ತು. ಹೀಗಾಗಿ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ಶರ್ಮಾ ಸ್ಪಷ್ಟಪಡಿಸಿದ್ದರು.
ಅಂದರೆ ಇಲ್ಲಿ ಎಲ್ಲಾ ವಿವಾದ ಮುಗಿಯಿತು ಅಂದುಕೊಂಡಿದ್ದ ವೇಳೆ ಚೇತನ್ ಶರ್ಮಾ ನೀಡಿದ ಈ ಹೇಳಿಕೆ ಮತ್ತೆ ಅಚ್ಚರಿಗೆ ಕಾರಣವಾಗಿತ್ತು. ವಿಶೇಷ ಎಂದರೆ ಅಲ್ಲಿಂದೀಚೆಗೆ, ಭಾರತವು ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಅದು ಟೆಸ್ಟ್ ಆಗಿರಲಿ. ಅಥವಾ ಮೊದಲೆರಡು ಏಕದಿನ ಪಂದ್ಯವಾಗಿರಲಿ…ಎಲ್ಲದರಲ್ಲೂ ಸೋತಿದೆ.
ಇಷ್ಟೇ ಅಲ್ಲದೆ ಟೆಸ್ಟ್ ಸರಣಿ ವೇಳೆ ವಿರಾಟ್ ಕೊಹ್ಲಿಯನ್ನು ಪತ್ರಿಕಾಗೋಷ್ಠಿಗೆ ಹಾಜರಾಗದಂತೆ ತಡೆದಿದ್ದು ಕೂಡ ಬಿಸಿಸಿಐ ಎಂದು ಹೇಳಲಾಗಿದೆ. ಹೀಗಾಗಿಯೇ ರಾಹುಲ್ ದ್ರಾವಿಡ್ ಅವರು ಕೊಹ್ಲಿ 100ನೇ ಟೆಸ್ಟ್ ಪಂದ್ಯದ ವೇಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದಿದ್ದರು. ಆದರೆ ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಇದುವೇ ಕೊಹ್ಲಿಯ ಕೊನೆಯ ಸುದ್ದಿಗೋಷ್ಠಿ ಎಂದು ಯಾರು ಕೂಡ ನಿರೀಕ್ಷಿಸಿರಲಿಲ್ಲ. ಅಂದರೆ ದ್ರಾವಿಡ್ ನೀಡಿದ ಹೇಳಿಕೆ ಮತ್ತು ಕೊಹ್ಲಿಯ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು ಗಮನಿಸಿದ್ರೆ ವಿರಾಟ್ ಕೊಹ್ಲಿಯನ್ನು ಯಾರೋ ನಿಯಂತ್ರಿಸಲು ಯತ್ನಿಸುತ್ತಿದ್ದರು ಎಂಬುದು ಸ್ಪಷ್ಟ.
ಏಕೆಂದರೆ ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಕ್‌ರೂಮ್ ರಾಜಕೀಯದ ಬಗ್ಗೆ ತಿಳಿದುಕೊಳ್ಳಲು ಗಂಗೂಲಿಗಿಂತ ಉತ್ತಮ ವ್ಯಕ್ತಿ ಮತ್ತೊಬ್ಬರಿಲ್ಲ. ಗ್ರೆಗ್ ಚಾಪೆಲ್ ಅವರೊಂದಿಗಿನ ಗಂಗೂಲಿ ಅವರ ಎಪಿಸೋಡ್ ಇನ್ನೂ ಪ್ರತಿಯೊಬ್ಬರ ಮನಸ್ಸಿನಲ್ಲಿ ತಾಜಾವಾಗಿದೆ. ಚಾಪೆಲ್ ನಡುವಣ ವಿವಾದದ ಬಳಿಕ ಗಂಗೂಲಿ ಬ್ಯಾಟಿಂಗ್ ಹಳಿತಪ್ಪಿತು. ಅಷ್ಟೇ ಅಲ್ಲದೆ ಶೀಘ್ರದಲ್ಲೇ ವೃತ್ತಿಜೀವನವು ಕೊನೆಗೊಂಡಿತು. ಹೀಗಾಗಿ ಗಂಗೂಲಿ ಕೊಹ್ಲಿ ಪಾಲಿಗೆ ಮತ್ತೊಬ್ಬ ಚಾಪೆಲ್ ಆಗದಿರುವುದು ಭಾರತೀಯ ಕ್ರಿಕೆಟ್‌ಗೆ ಉತ್ತಮ. ಏಕೆಂದರೆ ಟೀಮ್ ಇಂಡಿಯಾದ ಮುಂದೆ ಎರಡು ವಿಶ್ವಕಪ್ಗಳಿವೆ. ಪ್ರಸ್ತುತ ತಂಡದ ಪ್ರದರ್ಶನ ಗಮನಿಸಿದರೆ ಲೀಗ್ ಹಂತದಿಂದಲೇ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
ಹೀಗಾಗಿ ತಂಡದ ಆಟಗಾರರೊಂದಿಗೆ ಬಿಸಿಸಿಐ ಪ್ರಬುದ್ಧತೆಯಿಂದ ನಡೆದುಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ವಿರಾಟ್ ಕೊಹ್ಲಿಯ ಸಾಧನೆಯನ್ನು ಪರಿಗಣಿಸಿ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕಿದೆ. ಏಕೆಂದರೆ ಇದೀಗ ಭಾರತೀಯ ಕ್ರಿಕೆಟ್‌ಗೆ ಗಂಗೂಲಿಗಿಂತ ವಿರಾಟ್ ಕೊಹ್ಲಿಯ ಅವಶ್ಯಕತೆ ಹೆಚ್ಚು ಎಂಬುದು ಕಟು ಸತ್ಯ.
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(What Sourav Ganguly needs to show now is maturity, not notice to Virat Kohli)