Team India: 2021ರ ಟಿ20 ವಿಶ್ವಕಪ್ನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡ ಟೀಮ್ ಇಂಡಿಯಾ (Indian Team) ಮೊದಲ ಪಂದ್ಯದಲ್ಲೇ ಪಾಕಿಸ್ತಾನ್ ವಿರುದ್ದ ಸೋಲನುಭವಿಸಿತು. ಈ ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ದ ಕೂಡ ಪರಾಜಯಗೊಂಡಿತು. ಇದಾದ ಬಳಿಕ ನಮೀಬಿಯಾ ಹಾಗೂ ಅಫ್ಘಾನಿಸ್ತಾನ್ ವಿರುದ್ದ ಗೆದ್ದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಗ್ರೂಪ್ ಸ್ಟೇಜ್ನಲ್ಲೇ ಹೊರಬೀಳುವ ಮೂಲಕ ಭಾರತ ತಂಡ ನಿರಾಸೆ ಮೂಡಿಸಿತು. ಈ ಸೋಲಿಗೆ ಅಂದು ಕೇಳಿ ಬಂದ ದೊಡ್ಡ ಆರೋಪ ಕಳಪೆ ತಂಡದ ಆಯ್ಕೆ. ಏಕೆಂದರೆ ವಿರಾಟ್ ಕೊಹ್ಲಿ ಮುನ್ನಡೆಸಿದ್ದ ಆ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಭುಜದ ನೋವಿನ ಕಾರಣ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇನ್ನು ಸ್ಪಿನ್ನರ್ ಆಗಿ ತಂಡಕ್ಕೆ ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ಆಯ್ಕೆಯಾಗಿದ್ದರು. ಅಚ್ಚರಿ ಎಂದರೆ ಈ ಇಬ್ಬರು ಸ್ಪಿನ್ ಬೌಲರ್ಗಳು ಟಿ20 ವಿಶ್ವಕಪ್ ಬಳಿಕ ಒಮ್ಮೆಯೂ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ ಎಂಬುದು.
ಅಂದರೆ ಮಹತ್ವದ ಟೂರ್ನಿಗೆ ವರುಣ್ ಚಕ್ರವರ್ತಿ, ರಾಹುಲ್ ಚಹರ್ರಂತಹ ಸ್ಪಿನ್ನರ್ಗಳನ್ನು ಕೇವಲ ಐಪಿಎಲ್ ಮಾನದಂಡವಾಗಿ ಆಯ್ಕೆ ಮಾಡಿದ್ದರು. ಹಾಗೆಯೇ ಸಂಪೂರ್ಣ ಫಿಟ್ ಆಗಿಲ್ಲದಿದ್ದರೂ ಹಾರ್ದಿಕ್ ಪಾಂಡ್ಯಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಕೆಲ ಆಟಗಾರರನ್ನು ಐಪಿಎಲ್ನಲ್ಲಿನ ಪ್ರದರ್ಶನವನ್ನು ಮುಂದಿಟ್ಟು ಕಣಕ್ಕಿಳಿಸಲಾಗಿತ್ತು. ಇವೆಲ್ಲದರ ಪ್ರತಿಫಲವಾಗಿ ಟೀಮ್ ಇಂಡಿಯಾ 2021 ರ ವಿಶ್ವಕಪ್ನಲ್ಲಿ ಗ್ರೂಪ್ ಸ್ಟೇಜ್ನಲ್ಲೇ ಹೊರಬಿತ್ತು.
ಇದಾದ ಬಳಿಕ ಎಲ್ಲವೂ ಬದಲಾಯ್ತು. ನಾಯಕನ ಸ್ಥಾನದಲ್ಲಿ ವಿರಾಟ್ ಕೊಹ್ಲಿಯ ಬದಲು ರೋಹಿತ್ ಶರ್ಮಾ ಕಾಣಿಸಿಕೊಂಡರು. ರವಿ ಶಾಸ್ತ್ರಿ ಬದಲು ಕೋಚ್ ಆಗಿ ರಾಹುಲ್ ದ್ರಾವಿಡ್ ಬಂದರು. ಹೊಸ ನಾಯಕ-ನಯ ಕೋಚ್ನೊಂದಿಗೆ ಟೀಮ್ ಇಂಡಿಯಾ ಹೊಸ ಹುಮ್ಮಸ್ಸಿನಲ್ಲೇ ಎಲ್ಲಾ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ.
ಆದರೆ ಬಹು-ತಂಡಗಳ ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಎಡವಿದೆ. ಏಷ್ಯಾಕಪ್ನ ಸೂಪರ್-4 ಹಂತದಿಂದ ಹೊರಬೀಳುವ ಮೂಲಕ ಮತ್ತೊಮ್ಮೆ 2021 ರ ಹೀನಾಯ ಸೋಲನ್ನು ಟೀಮ್ ಇಂಡಿಯಾ ನೆನಪಿಸಿದೆ. ಕುತೂಹಲಕಾರಿ ವಿಷಯ ಎಂದರೆ ಈ ಬಾರಿ ಕೂಡ ಟೀಮ್ ಇಂಡಿಯಾ ಸೋಲಿಗೆ ಕಾರಣ ಬೌಲರ್ಗಳು ಎಂಬ ಟೀಕೆಗಳು ಕೇಳಿ ಬರುತ್ತಿವೆ.
ಅಂದರೆ 2021ರ ಟಿ20 ವಿಶ್ವಕಪ್ನಲ್ಲಿ ತಂಡದ ಆಯ್ಕೆ ವೇಳೆ ಮಾಡಲಾದ ತಪ್ಪನ್ನೇ ಈ ಬಾರಿ ಕೂಡ ಪುನರಾವರ್ತಿವಾಗಿದೆ. ಅದರಲ್ಲೂ ಪ್ರಮುಖ ಟೂರ್ನಿಗೆ ಕೇವಲ ಮೂವರು ಪರಿಪೂರ್ಣ ವೇಗದ ಬೌಲರ್ಗಳಿಗೆ ಮಣೆಹಾಕುವ ಮೂಲಕ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಚ್ಚರಿ ಮೂಡಿಸಿದ್ದಾರೆ.
ಏಕೆಂದರೆ ಯುಎಇನಂತಹ ದೇಶಗಳಲ್ಲಿ ಆಡುವುದೇ ದೊಡ್ಡ ಸವಾಲು. ಏಕೆಂದರೆ ಅಲ್ಲಿನ ಉಷ್ಣತೆಗೆ ಆಟಗಾರರು ಹೈರಾಣರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲೂ ಆಯ್ಕೆ ಸಮಿತಿ ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಮಾತ್ರ ವೇಗಿಗಳಾಗಿ ಆಯ್ಕೆ ಮಾಡಿರುವುದೇ ದೊಡ್ಡ ಅಚ್ಚರಿ.
ಅದರಲ್ಲೂ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲೂ ಯುವ ವೇಗಿಗಳನ್ನು ಕಣಕ್ಕಿಸಿ ದೊಡ್ಡ ತಪ್ಪನ್ನೇ ಮಾಡಿದೆ. ಅದರ ಫಲವಾಗಿ ಇದೀಗ ಏಷ್ಯಾಕಪ್ನ ಸೂಪರ್-4 ಹಂತದಿಂದ ಹೊರಬೀಳುವ ಮೂಲಕ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ.
ಅಂದರೆ ಇಲ್ಲಿ ಟೀಮ್ ಇಂಡಿಯಾ ಪ್ರಯೋಗಕ್ಕೆ ಮುಂದಾಗಿರುವುದು ಸ್ಪಷ್ಟ. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿಯ ಮಾಜಿ ಸದಸ್ಯ ದಿಲೀಪ್ ವೆಂಗ್ಸರ್ಕಾರ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರಮುಖ ಟೂರ್ನಿಗಳು ಇರುವುದು ಯಾವುದೇ ಪ್ರಯೋಗ ಮಾಡಲು ಅಲ್ಲ. ಬಹು ರಾಷ್ಟ್ರಗಳ ಟೂರ್ನಿಯು ಪ್ರತಿಷ್ಠೆಯಾಗಿರುತ್ತದೆ. ಇಂತಹ ಟೂರ್ನಿಗಳಲ್ಲಿ ಪ್ರಯೋಗ ನಡೆಸಿದಕ್ಕೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ವೆಂಗ್ಸರ್ಕಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೇಲ್ನೋಟಕ್ಕೆ ವೆಂಗ್ಸರ್ಕಾರ ಟೀಕೆಯು ಸರಿಯಾಗಿದೆ. ಏಕೆಂದರೆ ವರ್ಷಪೂರ್ತಿ ಸರಣಿಗಳನ್ನು ಆಡಿ, ಹಲವು ಪ್ರಯೋಗಗಳನ್ನು ನಡೆಸಿ ಟೀಮ್ ಇಂಡಿಯಾ ಒಂದು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಬೇಕಿತ್ತು. ಆದರೆ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಿದರುವುದೇ ಅಚ್ಚರಿ.
ಇಂತಹ ಪ್ರಯೋಗ ನಡೆಸಿದರ ಪರಿಣಾಮ ಏನು ಎಂಬುದಕ್ಕೆ 2021ರ ಟಿ20 ವಿಶ್ವಕಪ್ನಲ್ಲಿನ ಫಲಿತಾಂಶ ಆಯ್ಕೆ ಸಮಿತಿಯ ಮುಂದಿತ್ತು. ಇದಾಗ್ಯೂ ಈ ಬಾರಿ ಕೂಡ ಪ್ರಮುಖ ಟೂರ್ನಿಗೆ ಸಮತೋಲನದಿಂದ ಕೂಡಿರುವ ತಂಡವನ್ನು ರೂಪಿಸುವಲ್ಲಿ ಆಯ್ಕೆಗಾರರು ವಿಫಲರಾಗಿದ್ದಾರೆ.
ಇದೇ ತಪ್ಪನ್ನೇ ಇತ್ತೀಚೆಗೆ ಪಾಕಿಸ್ತಾನ್ ಮಾಜಿ ಆಟಗಾರ ಶೊಯೇಬ್ ಅಖ್ತರ್ ಕೂಡ ಎತ್ತಿ ತೋರಿಸಿದ್ದರು. ಟೀಮ್ ಇಂಡಿಯಾ ಮೊದಲು ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಲಿ. ಆ ಬಳಿಕ ತಂಡವನ್ನು ಆಯ್ಕೆ ಮಾಡಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅಖ್ತರ್ ವ್ಯಕ್ತಪಡಿಸಿದ್ದರು.
ಅಂದರೆ ಇಲ್ಲಿ ಪ್ಲೇಯಿಂಗ್ ಇಲೆವೆನ್ ಯಾರು ಆಡಬೇಕೆಂಬುದೇ ದೊಡ್ಡ ಗೊಂದಲವಾಗಿ ಕಾಣಿಸಿಕೊಂಡಿತು. ಒಂದು ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಇದ್ದರೆ, ಮತ್ತೊಂದು ಪಂದ್ಯದಲ್ಲಿ ದೀಪಕ್ ಹೂಡಾ, ರಿಷಭ್ ಪಂತ್ ಕಾಣಿಸಿಕೊಂಡರು. ಇನ್ನೊಂದು ಪಂದ್ಯದಲ್ಲಿ ರವಿ ಬಿಷ್ಣೋಯ್ ಕಾಣಿಸಿಕೊಂಡರೆ, ಮತ್ತೊಂದು ಪಂದ್ಯದಲ್ಲಿ ಅಶ್ವಿನ್ ಆಡಿದರು. ಇದ್ದ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಐದಾರು ಬದಲಾವಣೆ ಮಾಡಿಕೊಂಡಿದ್ದರು.
ಹೀಗೆ ಮಾಡಲಾದ ಬದಲಾವಣೆಗಳು, ತಂಡದಲ್ಲಿ ಉತ್ತಮ ಬೌಲರ್ಗಳ ಕೊರತೆ, ಅನಾನುಭವಿ ವೇಗಿಗಳ ಆಯ್ಕೆಯ ಫಲವಾಗಿ ಇದೀಗ ಏಷ್ಯಾಕಪ್ನಿಂದ ಟೀಮ್ ಇಂಡಿಯಾ ಹೊರಬಿದ್ದಿದೆ. ಇನ್ನು ಇರುವುದು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗಳು. ಈ ಸರಣಿಗಳಲ್ಲಿ ಟೀಮ್ ಇಂಡಿಯಾ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಏಕೆಂದರೆ ಏಷ್ಯಾಕಪ್ಗೂ ಮುನ್ನವೇ ಟೀಮ್ ಇಂಡಿಯಾ ಹಲವು ಸರಣಿಗಳನ್ನು ಗೆದ್ದಿದೆ. ಆದರೆ ಟೀಮ್ ಇಂಡಿಯಾ ಮುಂದಿರುವುದು ಟಿ20 ವಿಶ್ವಕಪ್ ಎಂಬುದು ನೆನಪಿರಲಿ. ಈ ವಿಶ್ವಕಪ್ಗಾಗಿ ಈಗಾಗಲೇ ಬಲಿಷ್ಠ ತಂಡವನ್ನು ರೂಪಿಸಬೇಕಿದೆ. ಅದರಲ್ಲೂ ಈ ಎರಡು ಸರಣಿಗಳಲ್ಲಿ ಕಣಕ್ಕಿಳಿದು ಫಾರ್ಮ್ ಪ್ರದರ್ಶಿಸಿದ ಆಟಗಾರರನ್ನೇ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಬೇಕಿದೆ.
ಒಂದು ವೇಳೆ ಕೊನೆಯ ಘಳಿಗೆಯಲ್ಲಿ ಪ್ರಯೋಗಕ್ಕಾಗಿ ಒಂದೆರೆಡು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡರೂ 2021 ರ ವಿಶ್ವಕಪ್ ಫಲಿತಾಂಶ ಪುನರಾವರ್ತನೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಸಾಕ್ಷಿಯೇ ಈ ಬಾರಿಯ ಏಷ್ಯಾಕಪ್ ಫಲಿತಾಂಶ. ಆದರೆ ಏಷ್ಯಾಕಪ್ನಲ್ಲಿ ಆಡಿದ ಬಹುತೇಕ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇದಾಗ್ಯೂ ಒಂದೆರೆಡು ಬದಲಾವಣೆ ಕಂಡು ಬರಲಿದೆ ಎಂಬ ಸುಳಿವನ್ನೂ ಸಹ ನೀಡಿದ್ದಾರೆ. ಆ ಒಂದೆರೆಡು ಬದಲಾವಣೆಯಲ್ಲಿ ಆಯ್ಕೆ ಸಮಿತಿ ಯಾರಿಗೆ ಮಣೆಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.