
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಜೋ ರೂಟ್ (104) ಅವರ ಶತಕದ ನೆರವಿನೊಂದಿಗೆ 387 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100) ಶತಕ ಸಿಡಿಸಿದ್ದರು. ಈ ಶತಕದ ಸಹಾಯದೊಂದಿಗೆ ಭಾರತ ತಂಡ ಕೂಡ ಪ್ರಥಮ ಇನಿಂಗ್ಸ್ನಲ್ಲಿ 387 ರನ್ಗಳಿಗೆ ಆಲೌಟ್ ಆಗಿದ್ದರು.
ಭಾರತ ತಂಡ ಆಲೌಟ್ ಆದ ಬೆನ್ನಲ್ಲೇ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಆದರೆ ಮೂರನೇ ದಿನದಾಟ ಮುಗಿಯಲು ಕೇವಲ 7 ನಿಮಿಷಗಳು ಬಾಕಿಯಿತ್ತು. ಇತ್ತ ಟೀಮ್ ಇಂಡಿಯಾ ಬೌಲರ್ಗಳು ಅಂತಿಮ ನಿಮಿಷಗಳ ಮೂಲಕ ಹೆಚ್ಚಿನ ಓವರ್ಗಳನ್ನು ಎಸೆಯಲು ಪ್ಲ್ಯಾನ್ ರೂಪಿಸಿದರೆ, ಅತ್ತ ಇಂಗ್ಲೆಂಡ್ ಬ್ಯಾಟರ್ಗಳು ಸಮಯ ವ್ಯರ್ಥ ಮಾಡಲು ಮುಂದಾಗಿದ್ದರು.
ಅದರಂತೆ ದ್ವಿತೀಯ ಇನಿಂಗ್ಸ್ನ 2ನೇ ಓವರ್ನಲ್ಲಿ ಇಂಗ್ಲೆಂಡ್ನ ಆರಂಭಿಕ ದಾಂಡಿಗ ಝಾಕ್ ಕ್ರಾಲಿ ಸಮಯ ವ್ಯರ್ಥಗೊಳಿಸುವ ಕಾಯಕಕ್ಕೆ ಕೈ ಹಾಕಿದರು. ಬುಮ್ರಾ 3ನೇ ಎಸೆತ ಎಸೆಯಲು ಬರುತ್ತಿದ್ದಂತೆ ಸೈಡ್ ಸ್ಕ್ರೀನ್ ತಗಾದೆ ತೆಗೆಯುವ ಮೂಲಕ ಬೌಲಿಂಗ್ ಮಾಡುವುದನ್ನು ತಡೆದರು. ಇದು ಕೇವಲ ನೆಪ ಎಂಬುದು ಟೀಮ್ ಇಂಡಿಯಾ ಆಟಗಾರರಿಗೆ ಸ್ಪಷ್ಟವಾಗಿತ್ತು.
ಇತ್ತ ಜಸ್ಪ್ರೀತ್ ಬುಮ್ರಾ ತಮ್ಮ ಅಸಹಾಯಕತೆ ತೋರ್ಪಡಿಸಿದರೆ, ಅತ್ತ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಬ್ಯಾಟರ್ಗಳು ಗುರಿಯಾಗಿಸಿ ಅದೇನೋ ಹೇಳಿದರು. ಇದೇ ವೇಳೆ ಸ್ಲಿಪ್ ಕಡೆಯಿಂದ ಮುನ್ನುಗ್ಗಿ ಬಂದ ಶುಭ್ಮನ್ ಗಿಲ್ ಇಂಗ್ಲೆಂಡ್ ಬ್ಯಾಟರ್ಗಳ ಚಳಿ ಬಿಡಿಸಿದರು. ಇದಾಗಿ ಐದನೇ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ ಝಾಕ್ ಕ್ರಾಲಿ ಕ್ರೀಸ್ನಿಂದ ಹೊರಗೆ ನಿಂತು ಬೆರಳಿಗೆ ನೋವಾಗುತ್ತಿದೆ ಎಂದು ನಾಟಕ ಮಾಡಲಾರಂಭಿಸಿದ್ದಾರೆ.
ಇದರಿಂದ ಕೆರಳಿದ ಟೀಮ್ ಇಂಡಿಯಾ ಆಟಗಾರರು ಕ್ರಾಲಿಯ ಈ ನಾಟಕವನ್ನು ಚಪ್ಪಾಳೆ ತಟ್ಟುತ್ತಾ ಗೇಲಿ ಮಾಡಿದರು. ಇದೇ ವೇಳೆ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಆಗಮಿಸಿ ನಾಟಕ ಸಾಕು ಆಡ್ರೊ ಎಂಬಾರ್ಥದಲ್ಲಿ ಕ್ರಾಲಿ ಜೊತೆ ವಾಗ್ವಾದಕ್ಕಿಳಿದರು. ಇತ್ತ ಕಡೆಯಿದ್ದ ಬೆನ್ ಡಕೆಟ್ ಕೂಡ ಗಿಲ್ ಜೊತೆ ಮಾತಿನ ಚಕಮಕಿಗೆ ಇಳಿದರು. ಇದೇ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ಪಂದ್ಯವನ್ನು ಮುಂದುವರೆಸುವಂತೆ ಕೋರಿದರು.
ಇತ್ತ ಸಮಯ ವ್ಯರ್ಥ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳು ಪಂದ್ಯವನ್ನು 2 ಓವರ್ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾದರು. ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 2 ರನ್ಗಳಿಸಿದೆ.
Always annoying when you can’t get another over in before close 🙄 pic.twitter.com/3Goknoe2n5
— England Cricket (@englandcricket) July 12, 2025
ಮೂರನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾ ಆಟಗಾರರ ವರ್ತನೆ ಬಗ್ಗೆ ಆಂಗ್ಲ ಪತ್ರಕರ್ತರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ, ಇದೆಲ್ಲವೂ ಆಟದ ಒಂದು ಭಾಗ. ಇಂಗ್ಲೆಂಡ್ ಬ್ಯಾಟರ್ಗಳು ಉದ್ದೇಶ ಏನಾಗಿತ್ತು ಎಂಬುದು ನಮಗೆ ಚೆನ್ನಾಗಿ ಅರ್ಥವಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್
ಈ ಮೂಲಕ ಟೀಮ್ ಇಂಡಿಯಾ ಆಟಗಾರರು ಸುಖಾಸುಮ್ಮನೆ ಜಗಳಕ್ಕೆ ಇಳಿದಿಲ್ಲ. ಆಂಗ್ಲ ಬ್ಯಾಟರ್ಗಳು ಸಮಯ ವ್ಯರ್ಥ ಮಾಡಲು ಮುಂದಾಗಿದ್ದಕ್ಕೆ, ಇಷ್ಟೆಲ್ಲಾ ರದ್ದಾಂತಗಳು ನಡೆದಿವೆ. ಇವೆಲ್ಲವೂ ಆಟದ ಭಾಗ ಎಂದು ಕೆಲ್ ರಾಹುಲ್ ಹೇಳಿದ್ದಾರೆ.