ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಉರುಳಿಸಿದ್ದು ಕೇವಲ ಮೂವರು ಬೌಲರ್ಗಳು. ಅವರಲ್ಲಿ ಮೊದಲಿಗರು ಜಿಮ್ಮಿ ಲೇಕರ್ (Jimmy Laker). 1956 ರಲ್ಲಿ ಇಂಗ್ಲೆಂಡ್ ಬೌಲರ್ ಲೇಕರ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ 53 ರನ್ ನೀಡಿ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿದ್ದರು. ಆ ಬಳಿಕ ಈ ದಾಖಲೆಯನ್ನು ಸರಿಗಟ್ಟಿದ್ದು ಕನ್ನಡಿಗ ಅನಿಲ್ ಕುಂಬ್ಳೆ (Anil Kumble). 1999 ರಲ್ಲಿ 74 ರನ್ ನೀಡಿ 10 ವಿಕೆಟ್ ಉರುಳಿಸುವ ಮೂಲಕ ಕುಂಬ್ಳೆ ವಿಶೇಷ ಸಾಧನೆ ಮಾಡಿದ್ದರು.
1999 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಡಗೋಪನ್ ರಮೇಶ್ (60) ಹಾಗೂ ಮೊಹಮ್ಮದ್ ಅಝರುದ್ದೀನ್ (67) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 252 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಅವರ ಸ್ಪಿನ್ ಮೋಡಿಗೆ ತಿಣುಕಾಡಿದರು. ಪರಿಣಾಮ ಪಾಕ್ ತಂಡ ಕೇವಲ 172 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಂಬ್ಳೆ 4 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 3 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆರಂಭಿಕ ಸಡಗೋಪನ್ ರಮೇಶ್ 96 ರನ್ ಬಾರಿಸಿದರೆ, ಸೌರವ್ ಗಂಗೂಲಿ ಅಜೇಯ 62 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 339 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ನ 80 ರನ್ಗಳ ಹಿನ್ನಡೆಯೊಂದಿಗೆ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 420 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಸಯೀದ್ ಅನ್ವರ್ (69) ಹಾಗೂ ಶಾಹಿದ್ ಅಫ್ರಿದಿ (41) ಉತ್ತಮ ಆರಂಭ ಒದಗಿಸಿದ್ದರು.
ಆದರೆ 25ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಅಫ್ರಿದಿ ಹಾಗೂ ಇಜಾಝ್ ಅಹ್ಮದ್ (0) ರನ್ನು ಔಟ್ ಮಾಡುವಲ್ಲಿ ಕುಂಬ್ಳೆ ಯಶಸ್ವಿಯಾದರು. ಇದಾದ ಬಳಿಕ ಕುಂಬ್ಳೆ ಹಿಂತಿರುಗಿ ನೋಡಲಿಲ್ಲ ಎನ್ನಬಹುದು.
ಇದನ್ನೂ ಓದಿ: VPL 2024: ಹೊಸ ಲೀಗ್ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಅನಿಲ್ ಕುಂಬ್ಳೆ ಪಾಕ್ ತಂಡವನ್ನು 207 ರನ್ಗಳಿಗೆ ಆಲೌಟ್ ಮಾಡಿದರು. ಈ ಪಂದ್ಯದಲ್ಲಿ 26.3 ಎಸೆತಗಳನ್ನು ಎಸೆದ ಕುಂಬ್ಳೆ 74 ರನ್ ನೀಡಿ 10 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದರು. ಅನಿಲ್ ಕುಂಬ್ಳೆ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಇಂದಿಗೆ (ಫೆಬ್ರವರಿ 7) 25 ವರ್ಷಗಳು ಪೂರ್ಣವಾಗಿವೆ.
On this day in 1999, Anil Kumble took all 10 wickets in an innings against Pakistan. pic.twitter.com/HsD3eOSruq
— Johns. (@CricCrazyJohns) February 7, 2023
ಅನಿಲ್ ಕುಂಬ್ಳೆ ಅವರ ಬಳಿಕ 2021 ರಲ್ಲಿ ನ್ಯೂಝಿಲೆಂಡ್ ಸ್ಪಿನ್ನರ್ ಎಜಾಝ್ ಪಟೇಲ್ 10 ವಿಕೆಟ್ಗಳ ಸಾಧನೆ ಮಾಡಿದ್ದರು. ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 47.5 ಓವರ್ಗಳನ್ನು ಎಸೆದ ಎಜಾಝ್ 119 ರನ್ ನೀಡಿ 10 ವಿಕೆಟ್ ಪಡೆದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನ 10 ವಿಕೆಟ್ಗಳನ್ನು ಕಬಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು.