
ಆತಿಥೇಯ ಶ್ರೀಲಂಕಾ ತಂಡವನ್ನು 165 ರನ್ಗಳಿಂದ ಮಣಿಸಿರುವ ಟೀಂ ಇಂಡಿಯಾ (India vs Sri Lanka) ಸರಣಿಯಲ್ಲಿ ಶುಭಾರಂಭ ಮಾಡಿದೆ. ತಂಡದ ಈ ಗೆಲುವಿನಲ್ಲಿ ಯುವ ಸ್ಪಿನ್ ಆಲ್‌ರೌಂಡರ್ ಮಾನವ್ ಸುತಾರ್ ( Manav Suthar) ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿ ಕೇವಲ 2 ಪಂದ್ಯಗಳಾಗಿದ್ದರೂ ಮಾನವ್ ಸುತಾರ್ ತಮ್ಮ ಮ್ಯಾಜಿಕಲ್ ಬೌಲಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಇದೀಗ ಗಾಲೆಯಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಸುತಾರ್, 45.2 ಓವರ್‌ಗಳನ್ನು ಬೌಲ್ ಮಾಡಿ 131 ರನ್ ನೀಡಿ 10 ವಿಕೆಟ್ ಕಬಳಿಸಿದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಸೇರಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳು ಸೇರಿವೆ. ಅಷ್ಟಕ್ಕೂ ಭಾರತ ಟೆಸ್ಟ್ ತಂಡದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ಮಾನವ್ ಸುತಾರ್ ಯಾರು? ದೇಶಿ ಕ್ರಿಕೆಟ್ನಲ್ಲಿ ಅವರ ಸಾಧನೆ ಏನು ಎಂಬುದನ್ನು ನೋಡುವುದಾದರೆ..
ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಆಗಸ್ಟ್ 3, 2002 ರಂದು ಜನಿಸಿದ ಮಾನವ್ ಸುತಾರ್ ಅವರ ತಂದೆ ಜಗದೀಶ್ ಸುತಾರ್ ಶಾಲೆಯೊಂದರಲ್ಲಿ ಪಿಟಿ ಶಿಕ್ಷಕರಾಗಿದ್ದರು. ಬಾಲ್ಯದಲ್ಲೇ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿ ಹೊಂದದ್ದ ಮಾನವ್ಗೆ ತಂದೆಯಿಂದ ನೆರವು ಸಿಕ್ಕಿತು. ಇದರ ಫಲವಾಗಿ ಮಾನವ್, ಮೊದಲಿಗೆ ರಾಜಸ್ಥಾನ ಪರ ವಯೋಮಾನದ ಕ್ರಿಕೆಟ್ ಆಡಿದರು. ಆ ನಂತರ ರಣಜಿ ಟ್ರೋಫಿಗೆ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿತು.
2022 ರಲ್ಲಿ ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮಾನವ್, ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದರು. ಈ ಬಳಿಕವೂ ಮಾನವ್ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದರು. ಇದರ ಫಲವಾಗಿ ಮಾನವ್ಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿತು. ಮಾನವ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 32 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು ಇದರಲ್ಲಿ 147 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ಮಾನವ್ 1071 ರನ್ ಕಲೆಹಾಕಿದ್ದಾರೆ.
ಐಪಿಎಲ್‌ನಲ್ಲಿಯೂ ಆಡಿರುವ ಮಾನವ್ ಸುತಾರ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಪಾದಾರ್ಪಣೆ ಮಾಡಿದರು. ಆ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದ ಮಾನವ್ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರು. ಆ ನಂತರ 2026 ರ ಐಪಿಎಲ್‌ನಲ್ಲಿ ಗುಜರಾತ್ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಮಾನವ್ ಮೂರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರು.
IND vs SL: 2ನೇ ಪಂದ್ಯದಲ್ಲೇ 10 ವಿಕೆಟ್; ವಿಶೇಷ ಕ್ಲಬ್ ಸೇರಿದ ಮಾನವ್ ಸುತಾರ್
ಇದೇ ವರ್ಷ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮಾನವ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅಮೋಘ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದ ಮಾನವ್ ಆ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
Published On - 3:53 pm, Wed, 19 August 26