IND vs AUS: 6 ಮಂದಿ ಅಲಭ್ಯ.. ಆಸ್ಟ್ರೇಲಿಯಾ ಪರ ಹೊಸ ಆರಂಭಿಕ ಜೋಡಿ ಕಣಕ್ಕೆ

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಪಂದ್ಯವು ಇಂದು (ಮಾ.4) ನಡೆಯಲಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ 6 ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಪಡೆಯಲ್ಲಿ ಕೆಲ ಬದಲಾವಣೆ ಕಾಣಿಸಿಕೊಳ್ಳುವುದು ಖಚಿತ.

IND vs AUS: 6 ಮಂದಿ ಅಲಭ್ಯ.. ಆಸ್ಟ್ರೇಲಿಯಾ ಪರ ಹೊಸ ಆರಂಭಿಕ ಜೋಡಿ ಕಣಕ್ಕೆ
Australia

Updated on: Mar 04, 2025 | 7:53 AM

ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಮಾ.4) ಮಧ್ಯಾಹ್ನ ಶುರುವಾಗಲಿರುವ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ.

ಏಕೆಂದರೆ ಆಸೀಸ್ ಪಡೆಯ 6 ಮಂದಿ ಈಗಾಗಲೇ ನಾನಾ ಕಾರಣಗಳಿಂದಾಗಿ ಹೊರಗುಳಿದಿದ್ದಾರೆ. ಹೀಗೆ ಟೂರ್ನಿ ಆರಂಭಕ್ಕೂ ಮುನ್ನ ಮತ್ತು ಆ ಬಳಿಕ ತಂಡದಿಂದ ಹೊರಗುಳಿದಿರುವ ಆಟಗಾರರೆಂದರೆ…

  1. ಪ್ಯಾಟ್ ಕಮಿನ್ಸ್ (ಗಾಯಾಳು)
  2. ಜೋಶ್ ಹ್ಯಾಝಲ್​ವುಡ್ (ಗಾಯಾಳು)
  3. ಮಿಚೆಲ್ ಸ್ಟಾರ್ಕ್ (ವೈಯುಕ್ತಿಕ ಕಾರಣ)
  4. ಮಿಚೆಲ್ ಮಾರ್ಷ್ (ಗಾಯಾಳು)
  5. ಮಾರ್ಕಸ್ ಸ್ಟೊಯಿನಿಸ್ (ನಿವೃತ್ತಿ)
  6. ಮ್ಯಾಥ್ಯೂ ಶಾರ್ಟ್ (ಗಾಯಾಳು)

ಇತ್ತ ಪ್ಯಾಟ್ ಕಮಿನ್ಸ್ ಅವರ ಅಲಭ್ಯತೆಯ ನಡುವೆ ಸ್ಟೀವ್ ಸ್ಮಿತ್ ಆಸೀಸ್ ಪಡೆಯನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಅಸಲಿ ಅಗ್ನಿ ಪರೀಕ್ಷೆ ಎದುರಾಗಿರುವುದು ಸೆಮಿಫೈನಲ್​ನಲ್ಲಿ. ಏಕೆಂದರೆ ಈ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಎದುರಿಸಬೇಕಿದೆ. ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ಈ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಈಗ ಕುತೂಹಲ.

ಹೊಸ ಆರಂಭಿಕ ಜೋಡಿ ಕಣಕ್ಕೆ:

ಟೀಮ್ ಇಂಡಿಯಾ ವಿರುದ್ಧದ ಈ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಹೊಸ ಆರಂಭಿಕ ಜೋಡಿ ಕಣಕ್ಕಿಳಿಯಲಿದ್ದಾರೆ. ಕಳೆದ ಮೂರು ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಿರುವ ಮ್ಯಾಥ್ಯೂ ಶಾರ್ಟ್ ಗಾಯಗೊಂಡು ಹೊರಬಿದ್ದಿದ್ದಾರೆ.

ಹೀಗಾಗಿ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ ಜೊತೆ ಹೊಸ ದಾಂಡಿಗನನ್ನು ಕಣಕ್ಕಿಳಿಸಲಿದೆ. ಇಲ್ಲಿ ಆಸೀಸ್ ಪಡೆಯ ಮೊದಲ ಆಯ್ಕೆ ಯುವ ಸ್ಪೋಟಕ ಬ್ಯಾಟರ್ ಜೇಕ್ ಫ್ರೇಸರ್ ಮೆಕ್​ಗುರ್ಕ್​.

ಇನ್ನು ಜೇಕ್ ಫ್ರೇಸರ್​ ಅನ್ನು ಕಣಕ್ಕಿಳಿಸದೇ ಸ್ಪಿನ್ನರ್​ಗೆ ತಂಡದಲ್ಲಿ ಸ್ಥಾನ ನೀಡಲು ಮುಂದಾದರೆ, ಟ್ರಾವಿಸ್ ಹೆಡ್ ಜೊತೆ ಅಲೆಕ್ಸ್ ಕ್ಯಾರಿ ಅಥವಾ ಜೋಶ್ ಇಂಗ್ಲಿಸ್ ಇನಿಂಗ್ಸ್ ಆರಂಭಿಸಬಹುದು. ಏಕೆಂದರೆ ಈ ಇಬ್ಬರು ಕೂಡ ಆರಂಭಿಕ ದಾಂಡಿಗರು. ಇದಾಗ್ಯೂ ಈ ಬಾರಿ ಜೋಶ್ ಇಂಗ್ಲಿಸ್ ಹಾಗೂ ಅಲೆಕ್ಸ್ ಕ್ಯಾರಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಹೀಗಾಗಿ ಆಸ್ಟ್ರೇಲಿಯಾ ಹೆಚ್ಚುವರಿ ಸ್ಪಿನ್ನರ್​ ಜೊತೆ ಕಣಕ್ಕಿಳಿಯಲು ಬಯಸಿದರೆ ಕ್ಯಾರಿ ಅಥವಾ ಇಂಗ್ಲಿಸ್​ಗೆ ಮುಂಬಡ್ತಿ ನೀಡುವ ಸಾಧ್ಯತೆಯಿದೆ. ಇದರ ಹೊರತಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಬೌಲರ್​ಗಳನ್ನೇ ಮುಂದುವರೆಸಲು ಬಯಸಿದರೆ ಟ್ರಾವಿಸ್ ಹೆಡ್ ಹಾಗೂ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.

ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?

ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಜೇಕ್ ಫ್ರೇಸರ್ ಮೆಕ್‌ಗುರ್ಕ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಆ್ಯಡಂ ಝಂಪಾ, ಶಾನ್ ಅಬಾಟ್, ಅಲೆಕ್ಸ್ ಕ್ಯಾರಿ , ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕೂಪರ್ ಕೊನೊಲಿ.