IPL 2022 Final: ಫೈನಲ್ ಪಂದ್ಯದಲ್ಲಿ ಗೆಲ್ಲೋದು ಯಾರೆಂದು ತಿಳಿಸಿದ ಸುರೇಶ್ ರೈನಾ
IPL 2022 Final RR vs GT: ಉಭಯ ತಂಡಗಳು ಈ ಬಾರಿ ಎರಡು ಪಂದ್ಯಗಳನ್ನು ಆಡಿದ್ದು, ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿದೆ. ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ದ ಗುಜರಾತ್ ಟೈಟಾನ್ಸ್ 37 ರನ್ಗಳಿಂದ ಜಯ ಸಾಧಿಸಿತ್ತು.
IPL 2022 Final: ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ಮುಖಾಮುಖಿಯಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಗುಜರಾತ್ ಟೈಟಾನ್ಸ್ ತಂಡವು ಇದೇ ಮೊದಲ ಬಾರಿಗೆ ಫೈನಲ್ ಆಡುತ್ತಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡವು ಎರಡನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ 2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಉಭಯ ತಂಡಗಳ ನಡುವೆ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದರ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸುರೇಶ್ ರೈನಾ, “ಗುಜರಾತ್ ಟೈಟಾನ್ಸ್ ಅಂತಿಮ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಜಸ್ಥಾನ್ ರಾಯಲ್ಸ್‌ಗಿಂತ ಸ್ವಲ್ಪ ಮೇಲುಗೈ ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಟೈಟಾನ್ಸ್ ತಂಡ 4-5 ದಿನಗಳ ಕಾಲ ವಿಶ್ರಾಂತಿ ಪಡೆದಿದೆ. ಈ ಸೀಸನ್‌ನಲ್ಲಿ ಗುಜರಾತ್ ತಂಡ ನೀಡಿದ ಪ್ರದರ್ಶನವನ್ನು ಗಮನಿಸಿದರೆ, ಅವರು ಈಗಲೂ ಬಲಿಷ್ಠ ತಂಡ. ಆದಾಗ್ಯೂ, ಜೋಸ್ ಬಟ್ಲರ್ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಬಟ್ಲರ್ ಸಿಡಿದೆದ್ದರೆ ಅದು ತಂಡಕ್ಕೆ ದೊಡ್ಡ ಬೋನಸ್ ಆಗಲಿದೆ. ಅಹಮದಾಬಾದ್‌ನ ಪಿಚ್ ಅತ್ಯುತ್ತಮವಾಗಿದ್ದು, ಇಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸ್ಟ್ರೋಕ್‌ಗಳನ್ನು ಎದುರು ನೋಡಬಹುದು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಕೂಡ ಪೈಪೋಟಿ ನಿರೀಕ್ಷಿಸಬಹುದು. ಇದಾಗ್ಯೂ ಗುಜರಾತ್ ಟೈಟಾನ್ಸ್ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿರುವ ಕಾರಣ, ರಾಜಸ್ಥಾನ್ಗಿಂತ ಗುಜರಾತ್ ತಂಡವು ಗೆಲ್ಲುವ ಫೇವರೇಟ್ ಪಟ್ಟಿಯಲ್ಲಿ ತುಸು ಮೇಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಉಭಯ ತಂಡಗಳು ಈ ಬಾರಿ ಎರಡು ಪಂದ್ಯಗಳನ್ನು ಆಡಿದ್ದು, ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿದೆ. ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ದ ಗುಜರಾತ್ ಟೈಟಾನ್ಸ್ 37 ರನ್ಗಳಿಂದ ಜಯ ಸಾಧಿಸಿತ್ತು. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗೆಲುವು ದಾಖಲಿಸಿತ್ತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಹೊಂದಿದೆ ಎನ್ನಬಹುದು.
ಇದಾಗ್ಯೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ಉತ್ತಮ ಪೈಪೋಟಿ ನೀಡಿತ್ತು. ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ 3 ಸಿಕ್ಸ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಫೈನಲ್ ಪಂದ್ಯದಲ್ಲಿ ಮತ್ತೆ ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಸಂಭಾವ್ಯ ಪ್ಲೇಯಿಂಗ್ XI:
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್.
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.