India’s Asia Cup squad: ಏಷ್ಯಾಕಪ್ಗಾಗಿ (Asia Cup 2022) ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. 15 ಸದಸ್ಯರ ಬಲಿಷ್ಠ ಬಳಗವನ್ನೇ ರೂಪಿಸಿರುವ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ (KL Rahul) ಹಾಗೂ ವಿರಾಟ್ ಕೊಹ್ಲಿ (Virat Kohli) ಮತ್ತೆ ಕಾಣಿಸಿಕೊಂಡಿದ್ದಾರೆ. ಆದರೆ ಈ ತಂಡದಲ್ಲಿ ಭಾರತದ ಇಬ್ಬರು ಪ್ರಮುಖ ಆಟಗಾರರು ಇಲ್ಲ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಹರ್ಷಲ್ ಪಟೇಲ್ (Harshal Patel) ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಇಂಗ್ಲೆಂಡ್ ವಿರುದ್ದದ ಸರಣಿಯ ಬಳಿಕ ಸಂಪೂರ್ಣ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ತಂಡದಲ್ಲಿದ್ದರೂ ಹರ್ಷಲ್ ಪಟೇಲ್ ಏಷ್ಯಾಕಪ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರ ಬೆನ್ನಲ್ಲೇ ಈ ಇಬ್ಬರು ಆಟಗಾರರು ಪ್ರಮುಖ ಟೂರ್ನಿಯಿಂದ ಹೊರಗುಳಿಯಲು ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈ ಪ್ರಶ್ನೆಗಳಿಗೆ ಸಿಗುವ ಉತ್ತರವೆಂದರೆ ಗಾಯದ ಸಮಸ್ಯೆ. ಹೀಗಾಗಿ ಈ ಇಬ್ಬರನ್ನು ಬಿಸಿಸಿಐ ಆಯ್ಕೆಗೆ ಪರಿಗಣಿಸಿಲ್ಲ. ಇಲ್ಲಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಏಷ್ಯಾಕಪ್ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಬಂದಿದೆ.
ಮತ್ತೊಂದೆಡೆ ವೆಸ್ಟ್ ಇಂಡೀಸ್ ಸರಣಿ ವೇಳೆ ಹರ್ಷಲ್ ಪಟೇಲ್ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ವಿಂಡೀಸ್ ವಿರುದ್ದದ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರಿಗೂ ವೈದ್ಯರು 4 ವಾರಗಳ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಅದರಂತೆ ಈ ಇಬ್ಬರು ಆಟಗಾರರು ಶೀಘ್ರದಲ್ಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇದೇ ಕಾರಣದಿಂದಾಗಿ ಟೀಮ್ ಇಂಡಿಯಾದ ಈ ಇಬ್ಬರು ಪ್ರಮುಖ ಬೌಲರ್ಗಳು ಏಷ್ಯಾಕಪ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಬುಮ್ರಾ ಹಾಗೂ ಹರ್ಷಲ್ ಪಟೇಲ್ ಸ್ಥಾನದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಭಾರತ ತಂಡದ ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡಿದ್ದ ಇಬ್ಬರು ಪ್ರಮುಖ ಬೌಲರ್ಗಳೇ ತಂಡದಿಂದ ಹೊರಗುಳಿದಿರುವುದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಬಹುದು.
ಏಷ್ಯಾಕಪ್ಗೆ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ.
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.