ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ (Ms Dhoni) ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ (Ravindra Jadeja) ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಇದಾಗ್ಯೂ ಸಿಎಸ್‌ಕೆ ತಂಡದ ವಿಕೆಟ್ ಕೀಪರ್ ಆಗಿ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಇದೇ ಮೊದಲ ಬಾರಿಗೆ ಧೋನಿ ಕೇವಲ ಆಟಗಾರನಾಗಿ ಸಿಎಸ್‌ಕೆ ಪರ ಕಣಕ್ಕಿಳಿಯಲಿದ್ದಾರೆ. ಸಿಎಸ್‌ಕೆ ತಂಡವನ್ನು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಎನಿಸಿಕೊಂಡಿರುವ ಧೋನಿ ಇದಕ್ಕಿದ್ದಂತೆ ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಪಿಎಲ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಕೆಕೆಆರ್ ವಿರುದ್ದ ಆಡಬೇಕಿದೆ. ಆದರೆ ಇದಕ್ಕೂ ಎರಡು ದಿನಗಳ ಮೊದಲು ಧೋನಿ ರಾಜೀನಾಮೆ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ದಿಢೀರ್ ಆಗಿ ಈ ನಿರ್ಧಾರಕ್ಕೆ ಬಂದಿಲ್ಲ ಎಂಬುದು ಸ್ಪಷ್ಟ.
ಏಕೆಂದರೆ ಕಳೆದ ಸೀಸನ್ ಐಪಿಎಲ್ ವೇಳೆಯೇ ಧೋನಿಯ ವಿದಾಯದ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದಾಗ್ಯೂ ಕೊನೆಯ ಬಾರಿಗೆ ಚೆನ್ನೈನಲ್ಲಿ ಆಡುವ ಮೂಲಕ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳುವುದಾಗಿ ಧೋನಿ ತಿಳಿಸಿದ್ದರು. ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ಧೋನಿ ಸಿಎಸ್‌ಕೆ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಏಕೆಂದರೆ ಧೋನಿ ಕಳೆದೆರಡು ಐಪಿಎಲ್ ಸೀಸನ್ಗಳಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದಾರೇ ಹೊರತು ಬ್ಯಾಟ್ಸ್ಮನ್ ಆಗಿ ಸಕ್ಸಸ್ ಆಗಿಲ್ಲ.
ಅದರಲ್ಲೂ ಕಳೆದ ಸೀಸನ್ನಲ್ಲೇ ಧೋನಿ ವಿದಾಯದ ಬಗ್ಗೆ ಸುಳಿವು ಸಿಕ್ಕಿದ್ದವು. ಆದರೆ ನಾವು ಧೋನಿಯನ್ನು ಮತ್ತೆರಡು ವರ್ಷಗಳವರೆಗೆ ತಂಡದಲ್ಲಿ ಮುಂದುವರೆಸಲು ಬಯಸುತ್ತೇವೆ ಎಂದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದರು. ಅಂದರೆ ಅದಾಗಲೇ ಧೋನಿ ಸಿಎಸ್‌ಕೆ ಫ್ರಾಂಚೈಸಿ ಜೊತೆ ನಿವೃತ್ತಿ ಬಗ್ಗೆ ಚರ್ಚಿಸಿದ್ದರು. ಇದೀಗ ಜಡೇಜಾ ಅವರಿಗೆ ನಾಯಕತ್ವ ಜವಾಬ್ದಾರಿ ವಹಿಸಿದ್ದಾರೆ. ಅಲ್ಲದೆ ಈ ಸೀಸನ್ನಲ್ಲಿ ರವೀಂದ್ರ ಜಡೇಜಾ ಅವರನ್ನು ಪರಿಪೂರ್ಣ ನಾಯಕನಾಗಿ ಮಾಡುವ ಜವಾಬ್ದಾರಿಯನ್ನು ಧೋನಿ ವಹಿಸಿಕೊಂಡಿದ್ದಾರೆ.
ಧೋನಿಯ ನಿರ್ಧಾರ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್, ಈ ನಿರ್ಧಾರವ ಸ್ವಲ್ಪ ಸಮಯದಿಂದ ಅವರ ಮನಸ್ಸಿನಲ್ಲಿತ್ತು. ಧೋನಿ ಕೂಡ ಪರಿವರ್ತನೆ ಬಯಸಿದ್ದರು. ಹೀಗಾಗಿ ಜಡೇಜಾಗೆ ಕ್ಯಾಪ್ಟನ್ ಪಟ್ಟ ಹಸ್ತಾಂತರಿಸಲು ಇದು ಸರಿಯಾದ ಸಮಯ ಎಂದು ಅವರು ಭಾವಿಸಿದ್ದಾರೆ. ಹೀಗಾಗಿ ಇದೇ ಸೀಸನ್ ಮೂಲಕ ರವೀಂದ್ರ ಜಡೇಜಾಗೆ ಧೋನಿ ಹೊಸ ಜವಾಬ್ದಾರಿವಹಿಸಿದ್ದಾರೆ ಎಂದು ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ.
ಅಂದರೆ ಇಲ್ಲಿ ಧೋನಿ ಈ ಸೀಸನ್ ಮಾತ್ರ ಆಡುವ ಸಾಧ್ಯತೆಯಿದೆ. ಮುಂದಿನ ಸೀಸನ್ ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಮೂಲಕ ವಿದಾಯ ಹೇಳಬಹುದು. ಏಕೆಂದರೆ ಕಳೆದ ಸೀಸನ್ ಐಪಿಎಲ್ ಬಳಿಕ ಅವರು ಚೆಪಾಕ್ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ಈ ಬಾರಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಂಬೈನಲ್ಲೇ ನಡೆಯುತ್ತಿದೆ. ಹೀಗಾಗಿ ಚೆನ್ನೈನಲ್ಲಿ ನಾಯಕನಾಗಿ ಕೊನೆಯ ಪಂದ್ಯವಾಡುವ ಅವಕಾಶ ಕೈತಪ್ಪಿದೆ.
ಇದಾಗ್ಯೂ ಮುಂದಿನ ವರ್ಷ ಅಥವಾ ಐಪಿಎಲ್ ಮುಕ್ತಾಯದ ಬಳಿಕ ಮಹೇಂದ್ರ ಸಿಂಗ್ ಧೋನಿಗಾಗಿ ಸಿಎಸ್‌ಕೆ ಚೆಪಾಕ್ ಮೈದಾನದಲ್ಲಿ ವಿಶೇಷ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದೆ. ಈ ಮೂಲಕ ಧೋನಿ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ 40 ವರ್ಷದ ಮಹೇಂದ್ರ ಸಿಂಗ್ ಧೋನಿ ಈ ಹಿಂದಿನ ನಿರ್ಧಾರದಂತೆ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳುವ ಸಲುವಾಗಿ ಇದೀಗ ನಾಯಕತ್ವವನ್ನು ತ್ಯಜಿಸಿದ್ದಾರೆ. ಹೀಗಾಗಿ ಒಂದು ವರ್ಷದೊಳಗೆ ಧೋನಿ ಅವರ ನಿವೃತ್ತಿಯನ್ನೂ ಕೂಡ ನಿರೀಕ್ಷಿಸಬಹುದು.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
(Why did Dhoni step down as CSK Captain?)