Mohammed Siraj: ಮೊಹಮ್ಮದ್ ಸಿರಾಜ್ನ ತಂಡದಿಂದ ಕೈ ಬಿಡಲು ಇದುವೇ ಕಾರಣ..!
India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಗುರುವಾರ (ಜುಲೈ 27) ದಿಂದ ಶುರುವಾಗಲಿದೆ.
India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದರ ಬೆನ್ನಲ್ಲೇ ಅತ್ಯುತ್ತಮ ಫಾರ್ಮ್ನಲ್ಲಿರುವ ಆಟಗಾರನನ್ನು ತಂಡದಿಂದ ದಿಢೀರ್ ಕೈ ಬಿಡಲು ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಆರಂಭದಲ್ಲಿ ಕೇಳಿ ಬಂದ ಉತ್ತರ ವಿಶ್ರಾಂತಿಯ ಅಗತ್ಯತೆ. ಆದರೀಗ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲು ಕಾರಣವೇನು ಎಂಬುದು ಸಹ ಬಹಿರಂಗವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ ಸಿರಾಜ್ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಶುರುವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಕಣಕ್ಕಿಳಿಯಬೇಕಿತ್ತು. ಆದರೆ ವಿಶ್ರಾಂತಿಯ ಸಲುವಾಗಿ ಮೊಹಮ್ಮದ್ ಸಿರಾಜ್ ಭಾರತಕ್ಕೆ ಮರಳಲಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಕಂಡು ಬಂದಿರುವ ಪಾದದ ನೋವು. ಟೀಮ್ ಇಂಡಿಯಾ ಪರ ಮೂರು ಮಾದರಿಯಲ್ಲೂ ಸತತ ಕ್ರಿಕೆಟ್ ಆಡುತ್ತಿರುವ ಸಿರಾಜ್ ಅವರು ಪಾದದ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ಮುನ್ನಚ್ಚೆರಿಕೆಯ ಸಲುವಾಗಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಹೊರಗಿಡಲು ನಿರ್ಧರಿಸಲಾಗಿದೆ.
ಇಲ್ಲಿ ಸಿರಾಜ್ ಅವರ ಗಾಯವು ಗಂಭೀರವಲ್ಲದಿದ್ದರೂ ಆಯ್ಕೆ ಸಮಿತಿ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್. ಈ ಎರಡು ಪ್ರಮುಖ ಟೂರ್ನಿಗಳಲ್ಲಿ ಸಿರಾಜ್ ಅವರ ಉಪಸ್ಥಿತಿಯು ತಂಡಕ್ಕೆ ಅನಿವಾರ್ಯ. ಏಕೆಂದರೆ ಕಳೆದೊಂದು ವರ್ಷದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅಲಭ್ಯತೆಯನ್ನು ಸರಿದೂಗಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದಾರೆ.
ಹೀಗಾಗಿ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ಗೂ ಮುನ್ನ ಗಾಯದ ಸಮಸ್ಯೆಗಳಿಂದ ಹೊರಗಿಡಲು ಮೊಹಮ್ಮದ್ ಸಿರಾಜ್ಗೆ ಹೆಚ್ಚಿನ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಇದೇ ಕಾರಣದಿಂದಾಗಿ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಆಯ್ಕೆ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಮೊಹಮ್ಮದ್ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಈಗ ಪ್ರಶ್ನೆ. ಏಕೆಂದರೆ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಇಲ್ಲ. ಇನ್ನು ವೇಗಿಗಳಾಗಿ ತಂಡದಲ್ಲಿರುವುದು ಜಯದೇವ್ ಉನಾದ್ಕಟ್, ಮುಖೇಶ್ ಕುಮಾರ್ ಹಾಗೂ ಉಮ್ರಾನ್ ಮಲಿಕ್ ಮಾತ್ರ. ಹೀಗಾಗಿ ಈ ಮೂವರು ವೇಗಿಗಳಿಗೆ ವೆಸ್ಟ್ ಇಂಡೀಸ್ ಸರಣಿಯು ಹೊಸ ಸವಾಲಾಗಿರಲಿದೆ.
ಇದನ್ನೂ ಓದಿ: T20 Records: 23 ರನ್ಗೆ ಚೀನಾ ತಂಡ ಆಲೌಟ್: 7 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದ ಇದ್ರಸ್
ಭಾರತ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.