
ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ಶ್ರೀಲಂಕಾ ( West Indies vs Sri Lanka) ತಂಡ 1-0 ಅಂತರದಿಂದ ಸರಣಿಯನ್ನು ಸೋತು ಬರಿಗೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಉಭಯ ತಂಡಗಳ ನಡುವೆ ನಡೆದಿದ್ದ ಮೊದಲ ಪಂದ್ಯವನ್ನು ಆತಿಥೇಯ ವಿಂಡೀಸ್ ಪಡೆ ಇನ್ನಿಂಗ್ಸ್ ಹಾಗೂ 217 ರನ್ಗಳಿಂದ ಗೆದ್ದುಕೊಂಡಿತ್ತು. ಇಂದು ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು. ಈ ಮೂಲಕ ಬರೋಬ್ಬರಿ 23 ವರ್ಷಗಳ ನಂತರ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು ಮಣಿಸಿದ ದಾಖಲೆ ವಿಂಡೀಸ್ ಪಾಲಾಗಿದೆ. ಹಾಗೆಯೇ ಮೂರು ವರ್ಷ ಮತ್ತು ಐದು ತಿಂಗಳ ನಂತರ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿ ಗೆದ್ದ ಸಾಧನೆಯನ್ನು ಮಾಡಿದೆ.
ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ 1 ಶತಕ ಹಾಗೂ ಮೂರು ಅರ್ಧಶತಕಗಳು ದಾಖಲಾದವು. ಇದರಲ್ಲಿ ಆರಂಭಿಕ ಲಹಿರು 188 ರನ್ ಕಲೆಹಾಕಿದರೆ, ಕಮಿಂದು ಮೆಂಡಿಸ್ 84, ಕುಸಾಲ್ ಮೆಂಡಿಸ್ 69 ಹಾಗೂ ಸೋನಾಲ್ ದಿನುಷಾ 94 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ನಾಲ್ವರ ಆಟದಿಂದಾಗಿ ಲಂಕಾ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 549 ರನ್ ಕಲೆಹಾಕಿತು.
ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಕೂಡ 499 ರನ್ ಕಲೆಹಾಕುವ ಮೂಲಕ ಲಂಕಾ ಪಡೆ ಬೃಹತ್ ಮುನ್ನಡೆ ಪಡೆದುಕೊಳ್ಳದಂತೆ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 50 ರನ್‌ಗಳ ಮುನ್ನಡೆ ಪಡೆದುಕೊಂಡ ಶ್ರೀಲಂಕಾ ಐದನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಅನ್ನು 251 ರನ್‌ಗಳಿಗೆ ಡಿಕ್ಲೇರ್ ಮಾಡಿ, ವಿಂಡೀಸ್‌ಗೆ 302 ರನ್‌ಗಳ ಗುರಿ ನಿಗದಿಪಡಿಸಿತು. ಆದಾಗ್ಯೂ, ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಪದೇ ಪದೇ ಮಳೆ ಸುರಿದು ಆಟಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ, ವೆಸ್ಟ್ ಇಂಡೀಸ್ 40 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 109 ರನ್ ಗಳಿಸಿತು ಮತ್ತು ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.
ENG vs NZ: ಬೆನ್ ಸ್ಟೋಕ್ಸ್ಗೆ ಟೆಸ್ಟ್ ಸರಣಿ ಸೋಲಿನ ವಿದಾಯ
ಈ ರೀತಿಯಾಗಿ ಮೇಲೆ ಹೇಳಿದಂತೆ ವೆಸ್ಟ್ ಇಂಡೀಸ್ ತಂಡವು 23 ವರ್ಷಗಳ ನಂತರ ಶ್ರೀಲಂಕಾವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸುವ ಮೂಲಕ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು. ಇದಲ್ಲದೆ, ವೆಸ್ಟ್ ಇಂಡೀಸ್ ಈ ಸರಣಿಯೊಂದಿಗೆ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೀಸನ್‌ನಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಪ್ರಸ್ತುತ, ವೆಸ್ಟ್ ಇಂಡೀಸ್ 10 ಟೆಸ್ಟ್ ಪಂದ್ಯಗಳಿಂದ ಕೇವಲ ಒಂದು ಗೆಲುವು, ಎರಡು ಡ್ರಾ ಮತ್ತು ಏಳು ಸೋಲುಗಳೊಂದಿಗೆ 20 ಅಂಕಗಳನ್ನು ಹೊಂದಿದ್ದು, 16.67 ಗೆಲುವಿನ ಶೇಕಡಾವಾರು ಹೊಂದಿದೆ. ಶ್ರೀಲಂಕಾ ಕೂಡ 20 ಅಂಕಗಳನ್ನು ಹೊಂದಿದೆ, ಆದರೆ ಅದರ ಗೆಲುವಿನ ಶೇಕಡಾವಾರು 41.67 ಕ್ಕೆ ಇಳಿದಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ 10 ತಂಡಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಆರನೇ ಸ್ಥಾನದಲ್ಲಿದೆ.
Published On - 4:10 pm, Wed, 8 July 26