
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಜುಲೈ 31 ರಿಂದ ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರಾ? ಎಂಬುದೇ ಈಗ ಕುತೂಹಲ. ಏಕೆಂದರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಬುಮ್ರಾ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ತಿಳಿಸಿದೆ. ಆದರೀಗ ಟೀಮ್ ಇಂಡಿಯಾ ಮುಂದಿರುವುದು ಸರಣಿ ನಿರ್ಣಾಯಕ ಪಂದ್ಯ.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಮಾತ್ರ ಸರಣಿಯನ್ನು 2-2 ಅಂತರದಿಂದ ಡ್ರಾನಲ್ಲಿ ಅಂತ್ಯಗೊಳಿಸಬಹುದು. ಹೀಗಾಗಿ ಭಾರತ ತಂಡಕ್ಕೆ ಪ್ರಮುಖ ವೇಗಿಯ ಅವಶ್ಯಕತೆಯಿದೆ. ಆದರೆ ಅತ್ತ ಬುಮ್ರಾಗೆ ವಿಶ್ರಾಂತಿ ನೀಡುವ ಯೋಜನೆಯೊಂದು ಬಿಸಿಸಿಐ ಮುಂದಿದೆ.
ಈ ಯೋಜನೆಯ ಬಗ್ಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ಪ್ರಶ್ನಿಸಿದಾಗ, ಸ್ಪಷ್ಟ ಉತ್ತರ ದೊರಕಿಲ್ಲ. ಅಂದರೆ ಐದನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆಗೆ ಗಂಭೀರ್, ಇನ್ನೂ ಸಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬ ಉತ್ತರ ನೀಡಿದ್ದಾರೆ. ಹೀಗಾಗಿ ಓವಲ್ ಟೆಸ್ಟ್ನಲ್ಲಿ ಬುಮ್ರಾ ಕಣಕ್ಕಿಳಿಯುವುದು ಇನ್ನೂ ಸಹ ಖಚಿತವಾಗಿಲ್ಲ ಎನ್ನಬಹುದು.
ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಇತ್ತ ಬುಮ್ರಾ ಅವರ ಅನುಪಸ್ಥಿತಿಯ ನಡುವೆಯೂ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಂಡಿದ್ದ ಬುಮ್ರಾ ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ನಡುವೆ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ ಬಲಗೈ ಬಂಟರಿಗೆ ಗೇಟ್ ಪಾಸ್?
ಒಂದು ವೇಳೆ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಸಿದರೆ ಅವರು ಮತ್ತೆ ನೋವಿನ ಸಮಸ್ಯೆಗೆ ಸಿಲುಕಬಹುದು. ಅದು ಅವರ ಟೆಸ್ಟ್ ವೃತ್ತಿಜೀವನದ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದೆ. ಇದೇ ಕಾರಣದಿಂದಾಗಿ ಅವರು ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವಾಡಿರಲಿಲ್ಲ. ಆ ಬಳಿಕ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳನ್ನಾಡಿರುವ ಜಸ್ಪ್ರೀತ್ ಬುಮ್ರಾಗೆ 5ನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ನೀಡಿದರೂ ಅಚ್ಚರಿಪಡಬೇಕಿಲ್ಲ.
Published On - 10:55 am, Tue, 29 July 25