2022 ರ ಮಹಿಳಾ ಏಷ್ಯಾಕಪ್‌ನಲ್ಲಿ (Women’s Asia Cup 2022) ಟೀಂ ಇಂಡಿಯಾ ವನಿತಾ ಪಡೆ ಮೊದಲ ಸೋಲು ಕಂಡಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡ ಕಠಿಣ ಪಂದ್ಯದಲ್ಲಿ 13 ರನ್‌ಗಳಿಂದ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋತಿದೆ. ಅಕ್ಟೋಬರ್ 7, ಶುಕ್ರವಾರ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅನುಭವಿ ಆಲ್‌ರೌಂಡರ್ ನಿದಾ ದಾರ್ ಅವರ ಅತ್ಯುತ್ತಮ ಇನ್ನಿಂಗ್ಸ್ ಮತ್ತು ನಂತರ ಮಾರಕ ಬೌಲಿಂಗ್‌ನ ಆಧಾರದ ಮೇಲೆ ಪಾಕಿಸ್ತಾನ 6 ವರ್ಷಗಳ ನಂತರ ಭಾರತದ ವಿರುದ್ಧ ಮೊದಲ ಜಯ ಸಾಧಿಸಿತು.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ತನ್ನ ನಾಲ್ಕನೇ ಪಂದ್ಯವನ್ನು ಆಡುತ್ತಿರುವ ಭಾರತ ತಂಡ ಗೆಲ್ಲಲು 138 ರನ್‌ಗಳ ಗುರಿಯನ್ನು ಹೊಂದಿತ್ತು. ಇದು ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಭಾರತ ತಂಡಕ್ಕೆ ತುಂಬಾ ಕಷ್ಟಕರವೆಂದು ಪರಿಗಣಿಸಲಿಲ್ಲ. ಆದರೆ ಪಾಕಿಸ್ತಾನದ ಬೌಲರ್‌ಗಳ ಪ್ರಕರ ಬೌಲಿಂಗ್ಗೆ ಬೆದರಿದ ಹರ್ಮನ್ ಪ್ರೀತ್ ಪಡೆ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಅಂತಿಮವಾಗಿ ಆಲೌಟ್ ಆಯಿತು.
ಭಾರತ ಎಡವಿದ್ದೇಲ್ಲಿ?
ಗೆಲ್ಲುವ ನಿರೀಕ್ಷೆಯಲ್ಲಿ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ನಾಲ್ಕನೇ ಓವರ್‌ನಲ್ಲಿಯೇ ತಂಡ ಎಸ್ ಮೇಘನಾ ವಿಕೆಟ್ ಕಳೆದುಕೊಂಡಿತು. ಆರನೇ ಓವರ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಜೆಮಿಮಾ ರೋಡ್ರಿಗಸ್ ಕೇವಲ 2 ರನ್ ಗಳಿಸಿ ನಿದಾ ದಾರ್ಗೆ ಬಲಿಯಾದರು. ಈ ವಿಕೆಟ್ ಪತನದಿಂದ ಭಾರತ ತಂಡದ ಇನ್ನಿಂಗ್ಸ್ ನಿಧಾನಗತಿಯಲ್ಲಿ ಸಾಗಿತು. 10ನೇ ಓವರ್ನಲ್ಲಿ ತಂಡ 50 ರನ್ ಗಡಿ ಮುಟ್ಟಿತ್ತಾದರೂ, ಅದೇ ಓವರ್ನಲ್ಲಿ ಸ್ಮೃತಿ ಮಂಧಾನ ಕೂಡ ಔಟಾದರು.
ನಿದಾ ದಾರ್ ಅವರ ಅದ್ಭುತ ಬ್ಯಾಟಿಂಗ್
ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ, ಈ ವರ್ಷ ಉಭಯ ತಂಡಗಳ ನಡುವಿನ ಪಂದ್ಯಗಳ ಏಕಪಕ್ಷೀಯ ಫಲಿತಾಂಶದಿಂದಾಗಿ ರೋಚಕ ಪಂದ್ಯದ ಆಸೆ ಮೂಡಿದ್ದು, ಅಭಿಮಾನಿಗಳೆಲ್ಲ ಸವಿಯತೊಡಗಿದರು. ನಿದಾ ದಾರ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಪಾಕ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
ಆದಾಗ್ಯೂ, ಪಾಕಿಸ್ತಾನಿ ತಂಡದ ಬ್ಯಾಟಿಂಗ್ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ನಾಯಕಿ ಬಿಸ್ಮಾ ಮರೂಫ್ ಮತ್ತು ದಾರ್ ನಡುವಿನ 76 ರನ್‌ಗಳ ಜೊತೆಯಾಟವನ್ನು ಹೊರತುಪಡಿಸಿ ಮತ್ತ್ಯಾರು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಲಿಲ್ಲ. ನಾಯಕಿ ಮರೂಫ್ ಅವರ ಇನ್ನಿಂಗ್ಸ್‌ನಲ್ಲಿಯೂ ಹೆಚ್ಚಿನ ಬಿರುಸಿನ ಬ್ಯಾಟಿಂಗ್ ಇರಲಿಲ್ಲ. ಆದರೆ 35 ವರ್ಷದ ಸ್ಟಾರ್ ಆಲ್ ರೌಂಡರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ರನ್ ವೇಗವನ್ನು ಹೆಚ್ಚಿಸಿದಲ್ಲದೆ 56 ರನ್‌ಗಳೊಂದಿಗೆ (5 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದರು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್ ಪಡೆದರು.
Published On - 4:28 pm, Fri, 7 October 22