World Cup 2025: ಆಸ್ಟ್ರೇಲಿಯಾದ ಗರ್ವಭಂಗ; ವಿಶ್ವಕಪ್ ಫೈನಲ್ಗೇರಿದ ಟೀಂ ಇಂಡಿಯಾ
Women's ODI World Cup 2025 semi-final: ಜೆಮಿಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ಹರ್ಮನ್ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡವು 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಜೆಮಿಮಾ ರೋಡ್ರಿಗಸ್ (Jemimah Rodrigues) ಅವರ ಅಜೇಯ ಶತಕ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಅವರ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡವು 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು (India vs Australia) ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಭಾರತಕ್ಕೆ 339 ರನ್‌ಗಳ ಬೃಹತ್ ಸವಾಲನ್ನು ಒಡ್ಡಿತ್ತು. ಗುರಿ ದೊಡ್ಡದಿದ್ದರಿಂದ ಹರ್ಮನ್ ಪಡೆ ಈ ಸವಾಲನ್ನು ಬೆನ್ನಟ್ಟಲು ಸಾಧ್ಯವೇ ಎಂಬ ಅನುಮಾನಗಳಿದ್ದವು. ಆದಾಗ್ಯೂ, ಬಲಿಷ್ಠ ಆಸ್ಟ್ರೇಲಿಯಾದೆದುರು ಸ್ಮರಣೀಯ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನೊಂದಿಗೆ ಗುಂಪು ಹಂತದಲ್ಲಿನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿದೆ. ಈಗ ವಿಶ್ವಕಪ್ ಟ್ರೋಫಿಗಾಗಿ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
338 ರನ್ ಕಲೆಹಾಕಿದ ಆಸ್ಟ್ರೇಲಿಯಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತು. ಆಸೀಸ್ ಪರ ಆರಂಭಿಕ ಆಟಗಾರ್ತಿ ಲಿಚ್‌ಫೀಲ್ಡ್ ಶತಕ ಬಾರಿಸಿದರು. ಇದರ ಜೊತೆಗೆ ಪೆರ್ರಿ ಅವರೊಂದಿಗೆ ಎರಡನೇ ವಿಕೆಟ್‌ಗೆ 155 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಲಿಚ್‌ಫೀಲ್ಡ್ 119 ರನ್‌ಗಳಿಗೆ ಔಟಾದರು. ಆ ಬಳಿಕ ಬಂದ ಬೆತ್ ಮೂನಿ (24) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (3) ಬೇಗನೇ ಪೆವಿಲಿಯನ್ ಸೇರಿಕೊಂಡರು. ಎಲ್ಲಿಸ್ ಪೆರ್ರಿ ಕೂಡ77 ರನ್‌ಗಳಿಗೆ ಔಟಾದರು.
ಆ ಬಳಿಕ ಬಂದ ತಹ್ಲಿಯಾ ಮೆಕ್‌ಗ್ರಾತ್ 12 ರನ್‌ಗಳಸಿ ರನೌಟ್ ಆದರೆ ಆಶ್ಲೇ ಗಾರ್ಡ್ನರ್ 63 ರನ್ ಬಾರಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಕೊನೆಯಲ್ಲಿ ದೀಪ್ತಿ ಶರ್ಮಾ, ಅಲಾನಾ ಕಿಂಗ್ (4) ಮತ್ತು ಸೋಫಿ ಮೊಲಿನಿಯಕ್ಸ್ ಅವರನ್ನು ಔಟ್ ಮಾಡಿದರೆ, ಕಿಮ್ ಗಾರ್ತ್ (17) ರನೌಟ್ ಆದ ಕಾರಣ ಆಸ್ಟ್ರೇಲಿಯಾ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಭಾರತ ಪರ ಶ್ರೀ ಚರಣ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್, ಕ್ರಾಂತಿ ಗೌರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಭಾರತಕ್ಕೆ ಆರಂಭಿಕ ಆಘಾತ
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರೂ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಆ ಬಳಿಕ ಇನ್ನಿಂಗ್ಸ್ ಕಟ್ಟಿದ ಜೆಮಿಮಾ ಹಾಗೂ ಹರ್ಮನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 341 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
World Cup 2025: ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಶತಕ ಬಾರಿಸಿದ ಜೆಮಿಮಾ ರೊಡ್ರಿಗಸ್
ಗೆಲುವಿನ ಇನ್ನಿಂಗ್ಸ್ ಆಡಿದ ಜೆಮಿಮಾ
ಭಾರತ ತಂಡ ಏಕದಿನ ವಿಶ್ವಕಪ್‌ನ ಫೈನಲ್ ತಲುಪುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2005 ಮತ್ತು 2017 ರಲ್ಲಿ ತಂಡವು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಭಾರತ ಇದುವರೆಗೆ ವಿಶ್ವಕಪ್ ಗೆದ್ದಿಲ್ಲವಾದ್ದರಿಂದ ಈಗ ತನ್ನ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಉತ್ತಮ ಅವಕಾಶವನ್ನು ಹೊಂದಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಪರ, ಜೆಮಿಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರೆ, ಹರ್ಮನ್ಪ್ರೀತ್ 88 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 89 ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ, ಕಿಮ್ ಗಾರ್ತ್ ಮತ್ತು ಅನ್ನಾಬೆಲ್ಲೆ ಸದರ್ಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Thu, 30 October 25
