IND vs PAK: ಭಾರತ- ಪಾಕ್ ವಿಶ್ವಕಪ್ ಕದನ; ಟೀಂ ಇಂಡಿಯಾದಲ್ಲಿ 1 ಬದಲಾವಣೆ

|

Updated on: Oct 06, 2024 | 3:28 PM

Women's T20 World Cup 2024: ಮಹಿಳಾ ಟಿ20 ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಇದರಂತೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

IND vs PAK: ಭಾರತ- ಪಾಕ್ ವಿಶ್ವಕಪ್ ಕದನ; ಟೀಂ ಇಂಡಿಯಾದಲ್ಲಿ 1 ಬದಲಾವಣೆ
ಭಾರತ- ಪಾಕ್
Follow us on

2024ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ವನಿತಾ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಾದರೆ ಟೀಂ ಇಂಡಿಯಾ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಯಾವುದೇ ಬೆಲೆ ತೆತ್ತಾದರೂ ಸೋಲಿಸಲೇಬೇಕು. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಅಂದರೆ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದ್ದು, ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಆ ಪ್ರಕಾರ, ಪಾಕ್ ವಿರುದ್ಧದ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

ಉಭಯ ತಂಡಗಳು

ಪಾಕಿಸ್ತಾನ ತಂಡ: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮಯಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಅರುಬ್ ಶಾ, ನಶ್ರ್ ಸಂಧು, ಸಾದಿಯಾ ಇಕ್ಬಾಲ್.

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಎಸ್ ಸಜ್ನಾ, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.

ಮುಖಾಮುಖಿ ವರದಿ

ಮಹಿಳಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 15 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ತಂಡ 12 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ತಂಡವು ಕೇವಲ 3 ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ.ಹಾಗೆಯೇ  ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಟೀಂ ಇಂಡಿಯಾ 5 ಬಾರಿ ಪಾಕಿಸ್ತಾನವನ್ನು ಸೋಲಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ತಂಡ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಪಾಯಿಂಟ್ ಪಟ್ಟಿಯಲ್ಲಿ ಪಾಕ್ ಮೇಲುಗೈ

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಲಾ 1 ಪಂದ್ಯಗಳನ್ನು ಆಡಿವೆ. ಇದರಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ 31 ರನ್‌ಗಳ ಜಯ ಸಾಧಿಸಿ, 2 ಅಂಕ ಮತ್ತು +1.550 ನೆಟ್ ರನ್ ರೇಟ್‌ನೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ತನ್ನ ಮೊದಲ ಪಂದ್ಯದಲ್ಲಿ 58 ರನ್‌ಗಳಿಂದ ಸೋತಿರುವ ಭಾರತ ತಂಡವು ಯಾವುದೇ ಅಂಕಗಳಿಲ್ಲದೆ -2.900 ನೆಟ್ ರನ್ ರೇಟ್‌ನೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಭಾರತಕ್ಕೆ ಸೋಲಿನ ಆರಂಭ

ಟೂರ್ನಿಯಲ್ಲಿ ಭಾರತ ತಂಡದ ಆರಂಭ ಅತ್ಯಂತ ಕಳಪೆಯಾಗಿದ್ದು, ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 58 ರನ್‌ಗಳ ಬೃಹತ್ ಅಂತರದಿಂದ ಸೋಲನುಭವಿಸಬೇಕಾಯಿತು. ಈ ಸೋಲಿನಿಂದಾಗಿ ಈಗ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ. ಹರ್ಮನ್‌ಪ್ರೀತ್‌ ಕೌರ್‌ ಬಳಗ ಸುಲಭವಾಗಿ ನಾಕೌಟ್‌ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕು. ಹೀಗಾಗಿ ಪಾಕಿಸ್ತಾನ ವಿರುದ್ಧದ ಈ ಪಂದ್ಯ ಮಾಡು ಇಲ್ಲವೇ ಮಡಿ ಎನ್ನುವುದಕ್ಕಿಂತ ಕಡಿಮೆಯಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sun, 6 October 24