
2025 ರ ಮಹಿಳಾ ವಿಶ್ವಕಪ್‌ನ (Women’s World Cup 2025) 28 ನೇ ಮತ್ತು ಕೊನೆಯ ಲೀಗ್ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವೆ ನಡೆಯಿತು. ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಯಿತು. ಮಳೆಯಿಂದಾಗಿ ಈ ಪಂದ್ಯವನ್ನು ತಲಾ 27 ಓವರ್‌ಗಳಿಗೆ ಇಳಿಸಲಾಯಿತು. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 9ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ ಮೊದಲ 9 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 57 ರನ್ ಕಲೆಹಾಕಿತ್ತು. ಆದರೆ ಈ ಹೊತ್ತಿಗೆ ಮಳೆ ಸುರಿಯಲಾರಂಭಿಸಿದರಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಮಳೆ ಜೋರಾದ ಕಾರಣ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು. ಇದೀಗ ಅಕ್ಟೋಬರ್ 30 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಮೇಲೆ ಹೇಳಿದಂತೆ ಮಳೆಯಿಂದಾಗಿ ಪಂದ್ಯವನ್ನು ತಡವಾಗಿ ಆರಂಭಿಸಬೇಕಾಯಿತು. ಇದರಿಂದಾಗಿ ಟಾಸ್ ಕೂಡ ವಿಳಂಬವಾಯಿತು. ಮೊದಲು ಓವರ್‌ಗಳನ್ನು ಕಡಿಮೆ ಮಾಡಿ ಪಂದ್ಯವನ್ನು ಪ್ರತಿ ಇನ್ನಿಂಗ್ಸ್‌ಗೆ 43 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ನಂತರ ಮತ್ತೆ ಮಳೆ ಬಂದು ಪಂದ್ಯವನ್ನು ಸುಮಾರು ಒಂದು ಗಂಟೆ ನಿಲ್ಲಿಸಲಾಯಿತು, ನಂತರ ಅಂಪೈರ್‌ಗಳು ಪ್ರತಿ ಇನ್ನಿಂಗ್ಸ್‌ಗೆ 27 ಓವರ್‌ಗಳನ್ನು ಮೀಸಲಿರಿಸಿದರು.
ಈ ಪಂದ್ಯದಲ್ಲಿ, ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 27 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 119 ರನ್ ಗಳಿಸಿತು. ತಂಡದ ಪರ ಶರ್ಮಿನ್ ಅಖ್ತರ್ ಗರಿಷ್ಠ 36 ರನ್ ಬಾರಿಸಿದರು. ಭಾರತ ಪರ ರಾಧಾ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರೆ, ಶ್ರೀ ಚರಣಿ ಎರಡು ವಿಕೆಟ್‌ಗಳನ್ನು ಪಡೆದರು. ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ಅದ್ಭುತ ಬೌಲಿಂಗ್ ಮಾಡಿ ತಲಾ ಒಂದು ವಿಕೆಟ್ ಪಡೆದರು.
ಗೆಲ್ಲಲು 126 ರನ್‌ಗಳ ಗುರಿ ಪಡೆದ ಭಾರತ ಉತ್ತಮ ಆರಂಭ ಪಡೆಯಿತು. ಈ ಪಂದ್ಯದಲ್ಲಿ ತಂಡದ ಆರಂಭಿಕರು ಬದಲಾಗಿದ್ದರು. ಏಕೆಂದರೆ ಫಿಲ್ಡಿಂಗ್ ಮಾಡುವ ವೇಳೆ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರ ಬದಲಿಗೆ ಅಮನ್‌ಜೋತ್ ಕೌರ್, ಸ್ಮೃತಿ ಮಂಧಾನ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಮಳೆ ಬಂದಾಗ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತ್ತು. ಸ್ಮೃತಿ ಮಂಧಾನ 34 ರನ್ ಬಾರಿಸಿದ್ದರೆ, ಅಮನ್‌ಜೋತ್ ಕೌರ್ 15 ರನ್ ಬಾರಿಸಿದ್ದರು.
Published On - 11:01 pm, Sun, 26 October 25