World Cup 2025: ಹೀಲಿ ಬ್ಯಾಕ್ ಟು ಬ್ಯಾಕ್ ಶತಕ; ಸೆಮಿಫೈನಲ್‌ಗೇರಿದ ಆಸ್ಟ್ರೇಲಿಯಾ

ICC Women's World Cup 2025: ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ನಾಯಕಿ ಅಲಿಸಾ ಹೀಲಿ ಅಮೋಘ 113 ರನ್ ಗಳಿಸಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು. ಬಾಂಗ್ಲಾದೇಶ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಲಿ ವಿಶ್ವಕಪ್‌ನಲ್ಲಿ ನಾಲ್ಕು ಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾದ ಅಜೇಯ ಓಟ ಮುಂದುವರೆದಿದೆ.

World Cup 2025: ಹೀಲಿ ಬ್ಯಾಕ್ ಟು ಬ್ಯಾಕ್ ಶತಕ; ಸೆಮಿಫೈನಲ್‌ಗೇರಿದ ಆಸ್ಟ್ರೇಲಿಯಾ
Aus W Vs Ban W

Updated on: Oct 16, 2025 | 10:27 PM

ಐಸಿಸಿ ಮಹಿಳಾ ವಿಶ್ವಕಪ್ 2025 (ICC Women’s World Cup 2025) ರ 17 ನೇ ಪಂದ್ಯವು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ (Bangladesh vs Australia) ನಡುವೆ ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ನಾಯಕಿ ಅಲಿಸಾ ಹೀಲಿ ಈ ಪಂದ್ಯದಲ್ಲಿ ಐತಿಹಾಸಿಕ ಇನ್ನಿಂಗ್ಸ್ ಆಡಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

198 ರನ್ ಕಲೆಹಾಕಿದ ಬಾಂಗ್ಲಾದೇಶ

ಈ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ ಇಡೀ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 198 ರನ್‌ ಮಾತ್ರ ಕಲೆಹಾಕಿತು. ಬಾಂಗ್ಲಾದೇಶದ ಪರ ಸೋಭಾನಾ ಮೊಸ್ತಾರಿ ಅಜೇಯ 66 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಆದಾಗ್ಯೂ, ಅವರಿಗೆ ಬೇರೆ ಯಾವುದೇ ಆಟಗಾರ್ತಿಯರಿಂದ ಬೆಂಬಲ ಸಿಗಲಿಲ್ಲ. ರೂಬಿ ಹೈದರ್ ಕೂಡ 44 ರನ್‌ ಬಾರಿಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದರೆ ಅವರಿಗೆ ದೊಡ್ಡ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟರ್​ಗೆ 20 ರನ್‌ಗಳ ಗಡಿ ತಲುಪಲು ಸಾಧ್ಯವಾಗಲಿಲ್ಲ.

ಅಲಿಸಾ ಹೀಲಿ ಶತಕ

ಬಾಂಗ್ಲಾದೇಶ ನೀಡಿದ್ದ 199 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಅವರ ಶತಕದ ನೆರವಿನಿಂದ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಅಲಿಸಾ ಹೀಲಿ ಮತ್ತು ಫೋಬೆ ಲಿಚ್‌ಫೀಲ್ಡ್ ಜೋಡಿ 24.5 ಓವರ್‌ಗಳಲ್ಲಿ 202 ರನ್‌ಗಳ ಜೊತೆಯಾಟ ನಡೆಸಿತು. ಅಲಿಸಾ ಹೀಲಿ 77 ಎಸೆತಗಳಲ್ಲಿ 20 ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 113 ರನ್ ಗಳಿಸಿದರು. ಹಿಂದಿನ ಪಂದ್ಯದಲ್ಲಿ ಅವರು ಭಾರತದ ವಿರುದ್ಧವೂ ಶತಕ ಬಾರಿಸದ್ದರು.

ಈ ಇನ್ನಿಂಗ್ಸ್‌ನೊಂದಿಗೆ ಅಲಿಸಾ ಹೀಲಿ ಪ್ರಮುಖ ದಾಖಲೆಯನ್ನು ಸೃಷ್ಟಿಸಿದ್ದು, ಮಹಿಳಾ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ 100 ರನ್‌ಗಳ ಗಡಿ ದಾಟಿದರು. ಇದರೊಂದಿಗೆ, ಅವರು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೂಲಕ ಅವರು ತಲಾ ಮೂರು ಶತಕಗಳನ್ನು ಗಳಿಸಿದ ಕರೆನ್ ರೋಲ್ಟನ್ ಮತ್ತು ಮೆಗ್ ಲ್ಯಾನಿಂಗ್ ಅವರನ್ನು ಹಿಂದಿಕ್ಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ