T20 World Cup 2026: 2026 ರ ಟಿ20 ವಿಶ್ವಕಪ್‌ಗೆ ಎಲ್ಲಾ 20 ತಂಡಗಳ ಹೆಸರು ಫೈನಲ್
T20 World Cup 2026: ಯುಎಇ ತಂಡ 2026ರ ಭಾರತ ಮತ್ತು ಶ್ರೀಲಂಕಾ ಆತಿಥ್ಯದ ಟಿ20 ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಜಪಾನ್ ವಿರುದ್ಧ ಗೆಲುವು ಸಾಧಿಸಿ 20ನೇ ತಂಡವಾಗಿ ಸ್ಥಾನ ಖಚಿತಪಡಿಸಿಕೊಂಡಿದೆ. ಈ ಮೂಲಕ ಮುಂದಿನ ವರ್ಷದ ಟೂರ್ನಿಗೆ ಸ್ಪರ್ಧಿಸಲಿರುವ 20 ತಂಡಗಳ ಪಟ್ಟಿ ಅಂತಿಮಗೊಂಡಿದ್ದು, ವಿಶ್ವದ ಅಗ್ರ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲು ಸಿದ್ಧವಾಗಿವೆ.

ಮುಂದಿನ ವರ್ಷ ಅಂದರೆ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ (T20 World Cup 2026) ಎಲ್ಲಾ 20 ತಂಡಗಳ ಹೆಸರು ಖಚಿತವಾಗಿದೆ. ಮಸ್ಕತ್‌ನಲ್ಲಿ ನಡೆದ ಟಿ20 ವಿಶ್ವಕಪ್ ಏಷ್ಯಾ ಮತ್ತು ಪೂರ್ವ ಏಷ್ಯಾ-ಪೆಸಿಫಿಕ್ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುಎಇ ತಂಡ ಜಪಾನ್ ತಂಡವನ್ನು ಸೋಲಿಸಿ 20ನೇ ತಂಡವಾಗಿ ಚುಟುಕು ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡ 116 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಯುಎಇ ಸುಲಭವಾಗಿ ಗೆಲುವು ಸಾಧಿಸಿ 2026 ರ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಯುಎಇಗೆ ಏಕಪಕ್ಷೀಯ ಗೆಲುವು
ಎರಡೂ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಯುಎಇ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದ ನಂತರ, ಯುಎಇ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 116 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಯುಎಇ ಕೇವಲ 12.1 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆಬೀರಿತು. ತಂಡದ ಪರ ಅಲಿಶಾನ್ ಶರಫು 46 ರನ್ ಬಾರಿಸಿದರೆ, ನಾಯಕ ಮೊಹಮ್ಮದ್ ವಾಸಿಮ್ ಕೂಡ 42 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
UAE lock in their place at next year’s #T20WorldCup in India & Sri Lanka 🔒🇦🇪
To know more 📲 https://t.co/RJPYa5d6ZZ pic.twitter.com/crHGViYy3O
— ICC (@ICC) October 16, 2025
20 ತಂಡಗಳ ನಡುವೆ ಪ್ರಶಸ್ತಿಗಾಗಿ ಫೈಟ್
ಕಳೆದ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್ 8 ತಲುಪುವ ಮೂಲಕ ಮುಂದಿನ ಆವೃತ್ತಿಗೆ ಅರ್ಹತೆ ಪಡೆದಿದ್ದವು. ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಶ್ರೇಯಾಂಕದ ಆಧಾರದ ಮೇಲೆ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ. ಕೆನಡಾ ಅಮೆರಿಕದ ಅರ್ಹತಾ ಸುತ್ತಿನಿಂದ ಅರ್ಹತೆ ಪಡೆದರೆ, ಇಟಲಿ ಮತ್ತು ನೆದರ್ಲ್ಯಾಂಡ್ಸ್ ಯುರೋಪಿಯನ್ ಅರ್ಹತಾ ಸುತ್ತಿನಿಂದ ಅರ್ಹತೆ ಪಡೆದಿವೆ. ನಮೀಬಿಯಾ ಮತ್ತು ಜಿಂಬಾಬ್ವೆ ಆಫ್ರಿಕಾ ಅರ್ಹತಾ ಸುತ್ತಿನಿಂದ ಅರ್ಹತೆ ಪಡೆದಿವೆ. ಮತ್ತೊಂದೆಡೆ, ಭಾರತ ಮತ್ತು ಶ್ರೀಲಂಕಾ ಆತಿಥೇಯರಾಗಿ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ.
Published On - 7:47 pm, Thu, 16 October 25
