World Cup 2025: ಶೇ. 69 ರಷ್ಟು ಮಳೆ..! ಭಾರತ- ಆಸೀಸ್ ಸೆಮೀಸ್ ಪಂದ್ಯ ನಡೆಯುವುದು ಡೌಟ್

Women's World Cup 2025 semi-final: 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ vs ಆಸ್ಟ್ರೇಲಿಯಾ ಸೆಮಿಫೈನಲ್ ಮಳೆಯಿಂದಾಗಿ ರದ್ದಾಗುವ ಭೀತಿಯಲ್ಲಿದೆ. ಅಕ್ಟೋಬರ್ 30ರಂದು ಮುಂಬೈನಲ್ಲಿ ನಡೆಯಬೇಕಿದ್ದ ಈ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮೀಸಲು ದಿನವಿದ್ದರೂ, ಅಂದೂ ಮಳೆ ನಿರೀಕ್ಷಿಸಲಾಗಿದೆ. ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಭಾರತಕ್ಕೆ ನಿರಾಸೆ ಎದುರಾಗಲಿದೆ.

World Cup 2025: ಶೇ. 69 ರಷ್ಟು ಮಳೆ..! ಭಾರತ- ಆಸೀಸ್ ಸೆಮೀಸ್ ಪಂದ್ಯ ನಡೆಯುವುದು ಡೌಟ್
Ind W Vs Aus W

Updated on: Oct 29, 2025 | 7:53 PM

2025 ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ( Women’s World Cup 2025) ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ಅಕ್ಟೋಬರ್ 30 ರಂದು ನಡೆಯಲಿದೆ. ಆದಾಗ್ಯೂ ಈ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮಳೆ. ವಾಸ್ತವವಾಗಿ ವಿಶ್ವಕಪ್​ನಲ್ಲಿ ಹಲವಾರು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಇದೀಗ ಸೆಮಿಫೈನಲ್‌ ಪಂದ್ಯಕ್ಕೂ ಮಳೆಯ ಕಾರ್ಮೋಡ ಆವರಿಸಿದೆ. ಟೀಂ ಇಂಡಿಯಾದ ಕೊನೆಯ ಲೀಗ್ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು. ಇದೀಗ ಸೆಮಿಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದು. ಆದಾಗ್ಯೂ ಸೆಮಿಫೈನಲ್‌ ಪಂದ್ಯಕ್ಕೆ ಮೀಸಲು ದಿನವಿರುವ ಕಾರಣ, ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ನಡೆಸಲಾಗುತ್ತದೆ. ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಫೈನಲ್​ಗೆ ಪ್ರವೇಶಿಸಲಿದೆ.

ಶೇ. 69 ರಷ್ಟು ಮಳೆಯಾಗುವ ಸಾಧ್ಯತೆ

ನವಿ ಮುಂಬೈನ DY ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಆದರೆ ಹವಾಮಾನ ವರದಿ ಪ್ರಕಾರ, ಪಂದ್ಯದ ದಿನದಂದು ಮುಂಬೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಮುಂದಿನ 48 ರಿಂದ 72 ಗಂಟೆಗಳಲ್ಲಿ ಮುಂಬೈನಲ್ಲಿ ಭಾರಿ ಗಾಳಿಯೊಂದಿಗೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್ ಮೇಲೆ ಪರಿಣಾಮ ಬೀರಬಹುದು. ಇನ್ನು ಪಂದ್ಯದ ದಿನದಂದು ಮಧ್ಯಾಹ್ನದ ವೇಳೆಗೆ ಶೇ. 69 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ದಿನ ಒಟ್ಟು 3.8 ಮಿ.ಮೀ. ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಆಸ್ಟ್ರೇಲಿಯಾಗೆ ಫೈನಲ್ ಟಿಕೆಟ್

ಸಮಾಧಾನಕರ ಸುದ್ದಿಯೆಂದರೆ ಮೇಲೆ ಹೇಳಿದಂತೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನು ನಿಗದಿಪಡಿಸಲಾಗಿದೆ. ಆದರೆ ಅಕ್ಟೋಬರ್ 31 ರಂದು ಸಹ ನವೀ ಮುಂಬೈನಲ್ಲಿ ಮಳೆ ಬೀಳುವ ನಿರೀಕ್ಷೆಯಿದೆ. ಇದರಿಂದಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಮಳೆಯಿಂದಾಗಿ ಮೀಸಲು ದಿನದಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯದಿದ್ದರೆ, ಮೇಲೆ ಹೇಳಿದಂತೆ ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಮಳೆಯಿಂದಾಗಿ ಪಂದ್ಯ ರದ್ದಾದರೆ, ಪಾಯಿಂಟ್ ಟೇಬಲ್ ಆಧರಿಸಿ ಫೈನಲ್​ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ತಂಡ ಫೈನಲ್‌ಗೆ ಮುನ್ನಡೆಯುತ್ತದೆ. ಹೀಗಾಗಿ, ಆಸ್ಟ್ರೇಲಿಯಾ 13 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ಸನ್ನಿವೇಶದಲ್ಲಿ, ಆಸ್ಟ್ರೇಲಿಯಾ ಫೈನಲ್‌ಗೆ ಮುನ್ನಡೆಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ