ಕ್ರಿಕೆಟ್ ಲೋಕಕ್ಕೆ ಮರಿ ಎಬಿ ಎಂಟ್ರಿ; ಕೊಹ್ಲಿ ಮಗನ ಜೊತೆ ಆರ್ಸಿಬಿ ಸೇರಲಿ ಎಂದ ಫ್ಯಾನ್ಸ್
AB de Villiers son first half-century: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರ ಪುತ್ರ ತಮ್ಮ 10ನೇ ವಯಸ್ಸಿನಲ್ಲಿ ಸ್ಥಳೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಈ ಸಂತಸದ ಸುದ್ದಿಯನ್ನು ಡಿವಿಲಿಯರ್ಸ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಡಿವಿಲಿಯರ್ಸ್ ಪುತ್ರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ಪುತ್ರನೊಂದಿಗೆ ಆಡುವ ಕನಸು ಕಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (AB de Villiers) ಅವರ ಪುತ್ರ ಕೂಡ ಇದೀಗ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದು, ಎಳೆಯ ವಯಸ್ಸಿನಲ್ಲೇ ಅಬ್ಬರಿಸಲು ಶುರು ಮಾಡಿದ್ದಾರೆ. ವಾಸ್ತವವಾಗಿ ಎಬಿ ಡಿವಿಲಿಯರ್ಸ್ ತಮ್ಮ ಮಗನ ಯಶಸ್ಸನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಡಿವಿಲಿಯರ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತ್ನಿ ಡೇನಿಯಲ್ ಅವರ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಮಗ ತಮ್ಮ ಕ್ರಿಕೆಟ್ ವೃತ್ತಿಜೀವನದ ಮೊದಲ ಅರ್ಧಶತಕ ಬಾರಿಸಿರುವ ಮಾಹಿತಿ ಇದೆ.
ಐಪಿಎಲ್‌ನಲ್ಲಿ ಆರ್ಸಿಬಿ ಆಪತ್ಭಾಂದವರೆಂದೇ ಖ್ಯಾತರಾಗಿದ್ದ ಎಬಿ ಡಿವಿಲಿಯರ್ಸ್ 2021 ರಂದು ಅಂತರರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದರು. ಅಂದಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಡಿವಿಲಿಯರ್ಸ್ ಈ ವರ್ಷ ನಡೆದಿದ್ದ ಲೆಜೆಂಡ್ಸ್ ಲೀಗ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವಹಿಸುವುದರ ಜೊತೆಗೆ ತಂಡವನ್ನು ಚೊಚ್ಚಲ ಚಾಂಪಿಯನ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಕ್ರಿಕೆಟ್ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಡಿವಿಲಿಯರ್ಸ್, ತಮ್ಮ ಹೇಳಿಕೆಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಡಿವಿಲಿಯರ್ಸ್ ತಮ್ಮ ಸಾಧನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಚೊಚ್ಚಲ ಅರ್ಧಶತಕ
ವಾಸ್ತವವಾಗಿ ಎಬಿ ಡಿವಿಲಿಯರ್ಸ್ ಅವರ 10 ವರ್ಷದ ಮಗ ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿದ್ದಾರೆ. ತಮ್ಮ ಮಗನ ಈ ಸಾಧನೆಯನ್ನು ಎಬಿ ಡಿವಿಲಿಯರ್ಸ್ ಅವರ ಮಡದಿ ಡೇನಿಯಲ್ ಡಿವಿಲಿಯರ್ಸ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆ ಸ್ಟೋರಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಡಿವಿಲಿಯರ್ಸ್, ‘ಓ ದೇವರೇ! ನಮ್ಮ ಮಗು ಎಬಿ ತನ್ನ ಮೊದಲ ಅರ್ಧಶತಕ ಬಾರಿಸಿದ್ದಾನೆ’ ಎಂದು ಬರೆದುಕೊಂಡಿದ್ದಾರೆ. ಡಿವಿಲಿಯರ್ಸ್ ಅವರ ಈ ಪೋಸ್ಟ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಮ್ಮ ಮಗ ವಿರಾಟ್ ಕೊಹ್ಲಿ ಅವರ ಮಗ ಅಕಾಯ್ ಕೊಹ್ಲಿಯೊಂದಿಗೆ ಭವಿಷ್ಯದಲ್ಲಿ ಆರ್ಸಿಬಿ ತಂಡವನ್ನು ಸೇರಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.
AB de Villiers’ son has arrived in cricket, now just waiting to see Akaay Kohli with him doing wonders for RCB in future 🤍 pic.twitter.com/GNqxrLnhH5
— Leisha (@katyxkohli17) October 26, 2025
ಡಿವಿಲಿಯರ್ಸ್ ಐಪಿಎಲ್ ವೃತ್ತಿಜೀವನ
ಡಿವಿಲಿಯರ್ಸ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಆಡಿದ 184 ಪಂದ್ಯಗಳಲ್ಲಿ 39.71 ರ ಸರಾಸರಿಯಲ್ಲಿ 5162 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರ ಸ್ಟ್ರೈಕ್ ರೇಟ್ 151.69 ಆಗಿದ್ದು, ಅವರ ಹೆಸರಿನಲ್ಲಿ 3 ಶತಕಗಳು ಮತ್ತು 40 ಅರ್ಧಶತಕಗಳಿವೆ. ಇನ್ನು ಆರ್ಸಿಬಿ ತಂಡದ ಪರ 157 ಪಂದ್ಯಗಳನ್ನಾಡಿದ್ದ ಎಬಿ 41.10 ಸರಾಸರಿಯಲ್ಲಿ 4522 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 158.33 ಆಗಿದ್ದು, ಆರ್‌ಸಿಬಿಯಲ್ಲಿದ್ದಾಗ ಅವರು 2 ಶತಕಗಳು ಮತ್ತು 37 ಅರ್ಧಶತಕಗಳನ್ನು ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
