
ಬಿಸಿಸಿಐ (BCCI) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಪ್ರತಿಷ್ಠೆಯ ಕದನ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. ಈಗಾಗಲೇ ಉಭಯ ದೇಶಗಳ ರಾಜಕೀಯ ಅರಾಜಕತೆಯಿಂದಾಗಿ ಈ ಎರಡೂ ದೇಶಗಳ ತಂಡಗಳು ಐಸಿಸಿ (ICC) ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಒಂದೆಡೆ ದ್ವಿಪಕ್ಷೀಯ ಸರಣಿ ಆರಂಭಿಸಬೇಕೆಂಬ ಬೇಡಿಕೆ ಇದ್ದರೆ, ಮತ್ತೊಂದೆಡೆ ಐಸಿಸಿ ಟೂರ್ನಿಗಳಲ್ಲಿಯೂ ಎರಡೂ ತಂಡಗಳು ಪರಸ್ಪರ ದೇಶಕ್ಕೆ ಹೋಗಿ ಆಡುವುದಕ್ಕೆ ಸಿದ್ಧರಿಲ್ಲ ಎಂಬ ಹಂತಕ್ಕೆ ಬಂದು ನಿಂತಿವೆ. 2023ರ ಏಷ್ಯಾಕಪ್‌ನಿಂದ (Asia Cup) ಆರಂಭವಾದ ವಿವಾದದ ಬಿಸಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೂ (World Cup) ತಟ್ಟಿದೆ. ವಾಸ್ತವವಾಗಿ ಈ ವರ್ಷದ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಅಲ್ಲಿಗೆ ಭಾರತ ತಂಡ ಹೋಗಲು ಹಿಂದೇಟು ಹಾಕಿದ್ದಕ್ಕೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ಯೋಚಿಸಲಾಗಿದೆ. ಈಗ ಪಾಕ್ ಕೂಡ ಇದೇ ವರಸೆ ತೆಗೆದಿದ್ದು, ವಿಶ್ವಕಪ್ನಲ್ಲಿ ನಮ್ಮ ಪಂದ್ಯಗಳನ್ನು ತಟಸ್ಥ ಸ್ಥಳಲ್ಲಿ ಆಡಿಸಬೇಕು ಎಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ತಂಡವು ತನ್ನ ವಿಶ್ವಕಪ್ ಪಂದ್ಯಗಳನ್ನು ಭಾರತದ ಹೊರಗೆ ಆಡಬಹುದು ಎಂದು ಹೇಳಿಕೊಂಡಿದ್ದಾರೆ.
ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. 2016ರ ನಂತರ ಮೊದಲ ಬಾರಿಗೆ ಭಾರತದಲ್ಲಿ ಐಸಿಸಿ ಟೂರ್ನಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ಅದರತ್ತ ನೆಟ್ಟಿದೆ. ಅದರಲ್ಲೂ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳಿಗಾಗಿ ಕ್ರಿಕೆಟ್ ಅಭಿಮಾನಿಗಳು ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಈಗ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ, ಭಾರತದಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡದ ನಡುವಿನ ಕ್ರಿಕೆಟ್ ಕದನ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
IPL 2023: ಐಪಿಎಲ್ನಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ 4 ನತದೃಷ್ಟ ತಂಡಗಳಿವು
ಪಾಕಿಸ್ತಾನ ತಂಡ ಕೂಡ ತಟಸ್ಥ ಸ್ಥಳದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡುವುದನ್ನು ಕಾಣಬಹುದು ಎಂದು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಸಿಇಒ ವಾಸಿಂ ಖಾನ್, ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನ ತಂಡವು ಭಾರತಕ್ಕೆ ಹೋಗುವ ಸಾಧ್ಯತೆ ಕಡಿಮೆ ಇದ್ದು, ಏಷ್ಯಾಕಪ್‌ನಂತೆ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ ಎಂದಿದ್ದಾರೆ. ಆದ್ದರಿಂದ ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳು ಭಾರತದ ಹೊರಗೆ ನಡೆಯುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಎರಡೂ ತಂಡಗಳು ಸೆಮಿಫೈನಲ್ ಅಥವಾ ಫೈನಲ್‌ಗೆ ತಲುಪಿದರೆ, ಫೈನಲ್ ಪಂದ್ಯವನ್ನು ಭಾರತದ ಹೊರಗೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಸದ್ಯಕ್ಕೆ ESPN-Cricinfo ವರದಿ ಮಾಡಿರುವ ಪ್ರಕಾರ, ಪಾಕಿಸ್ತಾನ, ವಿಶ್ವಕಪ್ ಆಡಲು ಭಾರತಕ್ಕೆ ಬರದಿರುವ ವಿಚಾರವನ್ನು ಐಸಿಸಿಯ ಇತ್ತೀಚಿನ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲಿ ಈ ‘ಹೈಬ್ರಿಡ್ ಮಾದರಿ’ ಅಂದರೆ ಎರಡು ವಿಭಿನ್ನ ಸ್ಥಳಗಳನ್ನು ಚರ್ಚಿಸಲಾಗಿದೆ. ಈ ಚರ್ಚೆಯು ಕೇವಲ ಅನೌಪಚಾರಿಕವಾಗಿದ್ದರೂ, ಪಿಸಿಬಿ ಈ ಮಾರ್ಗವನ್ನು ಅನುಸರಿಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಾಕ್ ಮನವಿಗೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದರೆ ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳು ಬಾಂಗ್ಲಾದೇಶದಲ್ಲಿ ನಡೆಯುವ ಸಾಧ್ಯತೆ ಇದೆ.
ವಾಸ್ತವವಾಗಿ ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ಆಡುವ ಆಲೋಚನೆ ಬಂದಿದ್ದೆ ಏಷ್ಯಾಕಪ್‌ನಿಂದ. ಈ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿದೆ. ಇದಕ್ಕೆ ಕಾಸರಣವೂ ಇದ್ದು, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳು ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಒಲ್ಲೆ ಎಂದಿತ್ತು. ಇತ್ತ ಪಾಕಿಸ್ತಾನ ಕೂಡ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆಯನ್ನೂ ಹಾಕಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ, ಬಿಸಿಸಿಐ ಮತ್ತು ಪಿಸಿಬಿ ಏಷ್ಯಾಕಪ್ ಅನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಒಪ್ಪಿಕೊಂಡಿವೆ. ಆದರೆ ಟೀಂ ಇಂಡಿಯಾದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಚಿಂತಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Thu, 30 March 23