ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ನ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ವಿವಾದದಿಂದಾಗಿ ಈ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಪಂದ್ಯದ ಆರಂಭದಿಂದಲೇ ಕೊಹ್ಲಿ ಘೋಷಣೆಗಳು ಮೊಳಗಿದ್ದವು.
ಅದರಲ್ಲೂ ನವೀನ್ ಉಲ್ ಹಕ್ ಬ್ಯಾಟಿಂಗ್ಗೆ ಇಳಿದಾಗ ಕೊಹ್ಲಿ ಹೆಸರಿನ ಘೋಷಣೆ ಮುಗಿಲು ಮುಟ್ಟಿತ್ತು. ಆದರೆ ಇದರ ಬಳಿಕ ಎಲ್ಲವೂ ಬದಲಾದವು. ಇಶಾನ್ ಕಿಶನ್ ಔಟಾದ ನಂತರ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಕ್ರೀಸ್‌ನಲ್ಲಿ ಮುಖಾಮುಖಿಯಾದರು.
ನವೀನ್ ವಿರುದ್ಧ ಕೊಹ್ಲಿ ಹೆಚ್ಚು ರನ್ ಗಳಿಸಲಿಲ್ಲ. ಅತ್ತ ನವೀನ್ ಉಲ್ ಹಕ್ಗೂ ಕೊಹ್ಲಿಯನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಇದಾಗ್ಯೂ ಕೊಹ್ಲಿ ಹೆಸರಿನ ಘೋಷಣೆಗಳು ಮೊಳಗುತ್ತಿದ್ದವು. ಆದರೆ ಕೊಹ್ಲಿ ತಮ್ಮ ದೆಹಲಿ ಅಭಿಮಾನಿಗಳಿಗೆ ಕೈ ಬೀಸಿ ನವೀನ್ ಅವರ ಮುಂದೆ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದರು.
ಅಷ್ಟೇ ಅಲ್ಲದೆ ಇಬ್ಬರೂ ಆಟಗಾರರು ಕೈಕುಲುಕಿ ಅಪ್ಪಿಕೊಂಡರು. ಈ ಮೂಲಕ ಈ ಹಿಂದಿನ ಎಲ್ಲಾ ವಿವಾದಕ್ಕೂ ಇಬ್ಬರು ಆಟಗಾರರು ತೆರೆ ಎಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Kohli – Naveen with “Gambhir” commentary pic.twitter.com/u8af72XnJs
— ਅੰਕਿਤ🏏∆ (@CaughtAtGully) October 11, 2023
ಇದನ್ನೂ ಓದಿ: ಕೊಹ್ಲಿ-ನವೀನ್ ವಿವಾದಕ್ಕೇನು ಕಾರಣ?
ಭಾರತ ತಂಡಕ್ಕೆ ಅಮೋಘ ಗೆಲುವು:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ನಾಯಕ ಹಶ್ಮತ್ (80) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿತು.
273 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಇಶಾನ್ ಕಿಶನ್ (47) ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ (131) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಜೇಯ 55 ರನ್ ಬಾರಿಸಿದರು. ಪರಿಣಾಮ 35 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಗುರಿ ಮುಟ್ಟಿತು. ಈ ಮೂಲಕ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫರೂಲ್ಹಕ್ ಫಾರೂಖಿ.